ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಶಿಕ್ಷಕರು ಮಕ್ಕಳಿಗೆ ಕೇವಲ ಪಠ್ಯ ಬೋಧನೆ ಮಾಡದೇ, ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗೂ ಒತ್ತು ನೀಡಬೇಕು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಶಾಲಾ ಯೋಜನೆಯಡಿ ₹1.20 ಕೋಟಿ ಮೊತ್ತದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಿಕ್ಷಕರು ಮಕ್ಕಳಿಗೆ ಕೇವಲ ಪಠ್ಯ ಬೋಧನೆ ಮಾಡದೇ, ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗೂ ಒತ್ತು ನೀಡಬೇಕು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಶಾಲಾ ಯೋಜನೆಯಡಿ ₹1.20 ಕೋಟಿ ಮೊತ್ತದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಬದ್ಧತೆಯೊಂದಿಗೆ ಕೆಲಸ ಮಾಡಬೇಕು. ಜತೆಗೆ ನಮ್ಮ ಈ ಶಾಲೆಯ ಮಕ್ಕಳು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.ಸುಮಾರು 60 ವರ್ಷಗಳಿಗೂ ಹಳೆಯದಾದ, ಬಾಗಲಕೋಟ ಮತ್ತು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯ ನೀಡಿದ ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢ ಶಾಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಗರ್ಲ್ಸ್ ಹೈಸ್ಕೂಲ್ ಎಂದೇ ಖ್ಯಾತಿ ಪಡೆದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಕಲಿತ ಲಕ್ಷಾಂತರ ಮಕ್ಕಳು, ಇಂದು ಸಮಾಜದ ವಿವಿಧ ಸ್ತರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದಿಗೂ ಬಾಗಲಕೋಟೆ ಮತ್ತು ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಶಾಲಾ ಕೊಠಡಿ ಹಳೆಯದಾಗಿದ್ದರಿಂದ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಇದಕ್ಕಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ತಕ್ಷಣವೇ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.ಶಾಲಾಭಿವೃದ್ಧಿಗೆ ಅಗತ್ಯ ಇರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಶೀಘ್ರವೇ ಕಾಲೇಜು ಮತ್ತು ಪ್ರೌಢಶಾಲೆ ವಿಭಾಗದ ಶಾಲಾ ಸುಧಾರಣೆ ಸಮಿತಿ ಸಭೆ ನಡೆಸಿ, ಇಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಪಟ್ಟಿ ಮಾಡಬೇಕು. ಇದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಈ ವೇಳೆ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದ್ಯಾಮಣ್ಣ ಗಾಳಿ, ನಗರಸಭೆ ಸದಸ್ಯ ಹಾಜಿಸಾಬ ದಂಡಿನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪುರ, ರಜಾಕ ಬೇವನೂರ, ಮುಖಂಡರಾದ ಹೊಳಬಸು ಶೆಟ್ಟರ, ವೀರೇಶ ಹುಂಡೇಕಾರ, ಎನ್.ಜಿ. ಕೋಟಿ, ಪಿಆರ್‌ಇಡಿ ಎಇಇ ರೇವಡಿ, ಹನಮಂತ ಭಜಂತ್ರಿ, ಪ್ರಾಚಾರ್ಯ ಪ್ರಕಾಶ ಜೇವೂರ, ಪ್ರೌಢ ಶಾಲೆ ವಿಭಾಗದ ಉಪ ಪ್ರಾಚಾರ್ಯ ಗಿರೀಜಾ ನಡುವಿನಮನಿ, ಶಿಕ್ಷಕ ಎಸ್.ಎಂ. ಮುತ್ತಗಿ, ಎಸ್.ಐ. ಕಂಠಿ ಮುಂತಾದವರು ಉಪಸ್ಥಿತರಿದ್ದರು.