ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ 2ನೇ ಮಹಡಿ ಇಎನ್‌ಟಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಆಕ್ಸಿಜನ್ ಹಾಗೂ ನೈಟ್ರೋಸಿಲ್‌ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬಸವಂತಪ್ಪ, ಆಸ್ಪತ್ರೆ ವೈದ್ಯರು, ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿ. ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿ ಸಮಯಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ನಿಮ್ಮೆಲ್ಲರ ಸಮಯಪ್ರಜ್ಞೆಗೆ ಅಭಿನಂದಿಸುತ್ತೇನೆ ಎಂದು ಶ್ಲಾಘಿಸಿದರು.

ಅವಘಡದಿಂದ ಹಾನಿಗೊಳಗಾದ ಆಪರೇಷನ್ ಥಿಯೇಟರ್ ಹಾಗೂ ವೈದ್ಯಕೀಯ ಉಪಕರಣಗಳು ಲಕ್ಷಾಂತರ ರು. ಮೌಲ್ಯದ್ದಾಗಿದ್ದು, ಘಟನೆಯಲ್ಲಿ ಬಹುಮೌಲ್ಯದ ವೈದ್ಯಕೀಯ ಉಪಕರಣ, ಸಲಕರಣೆಗಳು ನಾಶವಾಗಿವೆ. ಇಡೀ ಘಟನೆಗೆ ನಿಖರ ಕಾರಣ ಪತ್ತೆಹಚ್ಚಿ ಸಮಗ್ರ ತನಿಖೆ ನಡೆಸುವತ್ತ ಅಧಿಕಾರಿಗಳು ಮುಂದಾಗಬೇಕು. ಜಿಲ್ಲಾ ಸಚಿವರು, ಆರೋಗ್ಯ ಸಚಿವರಿಗೂ ಈ ಬಗ್ಗೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಮತ್ತಷ್ಟು ಬಲಪಡಿಸಿ. ಇಂತಹ ಘಟನೆಗಳು ಪುನಃ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆದಷ್ಟು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.


ಈ ಸಂದರ್ಭ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗೇಂದ್ರಪ್ಪ, ಆರ್‌ಎಂಒ ಡಾ.ನಾಗವೇಣಿ, ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಶೇಖರ ಇತರರು ಇದ್ದರು.