ಮತದಾರರ ಮತದಾನದ ಗೌಪ್ಯತೆಗೆ ಒತ್ತು ನೀಡಿ: ಹಿತೇಶ್ ಕೆ. ಕೊಯಲ್

| Published : Apr 09 2024, 12:54 AM IST

ಮತದಾರರ ಮತದಾನದ ಗೌಪ್ಯತೆಗೆ ಒತ್ತು ನೀಡಿ: ಹಿತೇಶ್ ಕೆ. ಕೊಯಲ್
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಅಟಲ್ ಬಿಹಾರಿ ಸಭಾಂಗಣದಲ್ಲಿ ಮತದಾನ ಕೇಂದ್ರಕ್ಕೆ ನಿಯೋಜಿಸಿರುವ ಮೈಕ್ರೋ ಅಬ್ಸರ್ವರ್‌ಗಳ ತರಬೇತಿ ಶಿಬಿರ ನಡೆಯಿತು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ವೀಕ್ಷಕರಾದ ಹಿತೇಶ್ ಕೆ. ಕೋಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಈ ಬಾರಿ ಚುನಾವಣಾ ಆಯೋಗವು ವಿಶೇಷವಾಗಿ ಮತದಾರರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. 85 ವರ್ಷ ಮೇಲ್ಪಟ್ಟ ಮತದಾರರಿಗೂ ಹಾಗೂ ಅಂಗವಿಕಲ ಮತದಾರರಿಗೂ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಇಲ್ಲಿಯೂ ಸಹ ಮತದಾನದ ಗೌಪ್ಯತೆಯಿಂದ ನಡೆಸಬೇಕು ಎಂದು ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ವೀಕ್ಷಕರಾದ ಹಿತೇಶ್ ಕೆ. ಕೋಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಸೋಮವಾರ ರಜತಾದ್ರಿಯ ಅಟಲ್ ಬಿಹಾರಿ ಸಭಾಂಗಣದಲ್ಲಿ ಮತದಾನ ಕೇಂದ್ರಕ್ಕೆ ನಿಯೋಜಿಸಿರುವ ಮೈಕ್ರೋ ಅಬ್ಸರ್ವರ್‌ಗಳ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಆಯೋಗವು ಚುನಾವಣೆಯು ನ್ಯಾಯ ಸಮ್ಮತವಾಗಿ ನಡೆಸಬೇಕೆಂಬ ಧ್ಯೇಯವನ್ನು ಹೊಂದಿದೆ. ಮತದಾನದ ದಿನದಂದು ಮತ ಕೇಂದ್ರಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆಗಳು ನಡೆಯುವಂತೆ ನೋಡಿಕೊಳ್ಳಲು ಮೈಕ್ರೋ ಅಬ್ಸರ್ವರ್‌ಗಳಾಗಿ ನಿಮ್ಮನ್ನು ನೇಮಕ ಮಾಡಲಾಗಿದ್ದು, ಚುನಾವಣಾ ಆಯೋಗವು ನೀಡಿರುವ ನಿರ್ದೇಶನ ಹಾಗೂ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ಜವಾಬ್ದಾರಿಯುತವಾಗಿ ತಾವು ನಿರ್ವಹಿಸಬೇಕು ಎಂದರು.

ಪ್ರತಿಯೊಬ್ಬರೂ ಮಾಡುವ ಮತದಾನವನ್ನು ಗೌಪ್ಯವಾಗಿರುವಂತೆ ನೋಡಿಕೊಳ್ಳಬೇಕು. ಮತದಾನ ಕೇಂದ್ರಕ್ಕೆ ಅಧಿಕಾರಿಗಳು ಬಂದ ಸಮಯ, ಮತದಾನ ಪ್ರಾರಂಭಕ್ಕೂ ಮುನ್ನ ಮಾರ್ಕ್ ಪೋಲ್ ಮಾಡಿರುವ ಬಗ್ಗೆ ಮತದಾನ ಪ್ರಾರಂಭಿಸಿರುವ ಸಮಯ, ಮುಕ್ತವಾದ ಸಮಯಗಳ ಬಗ್ಗೆ ವರದಿ ನೀಡಬೇಕೆಂದರು.

ರಾಜ್ಯ ಮಟ್ಟದ ಚುನಾವಣೆ ತರಬೇತುದಾರ ಅಶೋಕ್ ಕಾಮತ್ ಮಾತನಾಡಿ, ಚುನಾವಣೆ ಅಧಿಕಾರಿಗಳು ಕರ್ತವ್ಯಗಳ ಕುರಿತು ಸಂಪೂರ್ಣ ಅರಿವನ್ನು ಈ ಮೊದಲೇ ಹೊಂದಿರಬೇಕು. ಚುನಾವಣೆ ದಿನದಂದು ಯಾವುದೇ ಅವಘಡಗಳು ಸಂಭವಿಸದಂತೆ ನಿಗಾ ವಹಿಸಬೇಕು ಹಾಗೂ ಮತ್ತಿತರ ಮಾಹಿತಿಗಳನ್ನು ವಿವರಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತದಾನ ಕೇಂದ್ರಕ್ಕೆ ನಿಯೋಜಿಸಿರುವ ಮೈಕ್ರೋ ಅಬ್ಸರ್ವರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.