ಸಾರಾಂಶ
ತಾಲೂಕಿನ ತಿರುಮಣಿ ವಳ್ಳೂರು ಹಾಗೂ ರಾಪ್ಟೆ ಗ್ರಾಪಂ ವ್ಯಾಪ್ತಿಯ ವಿದ್ಯುತ್ ಉತ್ಪಾದನೆಯ ಸೋಲಾರ್ ಪಾರ್ಕ್‌ಗಳಲ್ಲಿ ತಾಲೂಕಿನ 5 ಸಾವಿರ ಯುವಕರಿಗೆ ಕೆಲಸ ನೀಡುವಂತೆ ಬಹುಜನ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಳವಾಡ ಟಿ.ಹನುಮಂತರಾಯ ಒತ್ತಾಯಿಸಿದರು.
ಪಾವಗಡ : ತಾಲೂಕಿನ ತಿರುಮಣಿ ವಳ್ಳೂರು ಹಾಗೂ ರಾಪ್ಟೆ ಗ್ರಾಪಂ ವ್ಯಾಪ್ತಿಯ ವಿದ್ಯುತ್ ಉತ್ಪಾದನೆಯ ಸೋಲಾರ್ ಪಾರ್ಕ್‌ಗಳಲ್ಲಿ ತಾಲೂಕಿನ 5 ಸಾವಿರ ಯುವಕರಿಗೆ ಕೆಲಸ ನೀಡುವಂತೆ ಬಹುಜನ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಳವಾಡ ಟಿ.ಹನುಮಂತರಾಯ ಒತ್ತಾಯಿಸಿದರು.
ತಾಲೂಕು ಕಚೇರಿ ಬಳಿ ಬಹುಜನ ಸಮಾಜ ಪಕ್ಷದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ತಿರುಮಣಿ ಹಾಗೂ ವಳ್ಳೂರು ಗ್ರಾಪಂ ವ್ಯಾಪ್ತಿಯ ಸುಮಾರು 13 ಸಾವಿರ ಎಕರೆ ರೈತರ ಜಮೀನುಗಳಲ್ಲಿ ಸೌರಶಕ್ತಿ ಘಟಕಗಳು ಕಾರ್ಯಾರಂಭದಲ್ಲಿದ್ದು, ಸರ್ಕಾರದ ನಿಯಮನುಸಾರ ಪಾರ್ಕ್‌ಗಳಲ್ಲಿ ಸ್ಥಳೀಯ ವಿದ್ಯಾವಂತ ಯುವಕರಿಗೆ ಕೆಲಸ ನೀಡದೇ ಹೊರ ರಾಜ್ಯದ ಯುವಕರಿಗೆ ಕೆಲಸ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಇಲ್ಲಿನ ಬಹುತೇಕ ವಿದ್ಯಾವಂತರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿ ಅಲೆಯುವ ಪರಿಸ್ಥಿತಿ ಬಂದೋದಗಿದೆ. ಸೋಲಾರ್ ಪಾರ್ಕ್ ನಿರ್ಮಾಣದ ಸಲುವಾಗಿ ಗುತ್ತಿಗೆ ಆಧಾರದ ಮೇಲೆ ರೈತರ ಜಮೀನು ವಶಕ್ಕೆ ಪಡೆಯುವ ವೇಳೆ ಸ್ಥಳೀಯ ವಿದ್ಯಾವಂತರಿಗೆ ಸೌರಶಕ್ತಿ ಘಟಕಗಳಲ್ಲಿ ಉದ್ಯೋಗ ನೀಡುವ ಭರವಸೆ ವ್ಯಕ್ತಪಡಿಸಿದ್ದು, ಕರಾರಿನ ಪ್ರಕಾರ ಪಾರ್ಕ್‌ಗಳ ಸ್ಪಚ್ಛತೆಗೆ ಇಲ್ಲಿನ ಕೃಷಿ ಕಾರ್ಮಿಕರಿಗೆ ಕೆಲಸ ನೀಡದೇ ವಂಚಿಸಿರುವುದು ಸಮಂಜಸವಲ್ಲ. ಮೊದಲು ನುಡಿದಂತೆ ನಡೆದುಕೊಳ್ಳುವ ಮೂಲಕ ನಿಯಮನುಸಾರ ಸ್ಥಳೀಯರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಬಹುಜನ ಪಕ್ಷದ ಅಧ್ಯಕ್ಷ ವದನಕಲ್ಲು ತಿಪ್ಪೇಸ್ವಾಮಿ, ಎಂ.ಶಿವಕುಮಾರ್, ಡಿ.ಟಿ.ನರಸಿಂಹಮೂರ್ತಿ ಇತರರಿದ್ದರು.