ಸಾರಾಂಶ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಕಚೇರಿ ನೌಕರ ಸಿ.ಎಂ. ಗುರುಲಿಂಗಣ್ಣ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಶಹಾಪುರದಲ್ಲಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಕಚೇರಿ ಚುನಾವಣಾ ಶಾಖೆ ನೌಕರ ಸಿ.ಎಂ. ಗುರುಲಿಂಗಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಕಿರುಕುಳ ನೀಡಿದ ಅಧಿಕಾರಿಗೆ ಶಿಕ್ಷೆಯಾಗಬೇಕು. ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಾಯಪ್ಪಗೌಡ ಹುಡೇದ್ ಮಾತನಾಡಿ, ಗುರುಲಿಂಗಣ್ಣ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡುತ್ತಿದ್ದರು. ಪ್ರಾಮಾಣಿಕತೆ ನೌಕರರಾಗಿದ್ದರು. ಕೆಲಸದ ಒತ್ತಡ ಹಾಗೂ ಅವಮಾನದಿಂದ ಸಾವಿಗೆ ಶರಣಾಗುತ್ತಿದ್ದೇನೆ ಎಂದು ಡೆತ್‌ನೋಟ್ ಬರೆದಿದ್ದಾರೆ. ನೌಕರನ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಕೂಡಲೇ ಒದಗಿಸಬೇಕು. ಮೇಲಧಿಕಾರಿಗಳು ಅನಾವಶ್ಯಕವಾಗಿ ನೌಕರರಿಗೆ ಕಿರುಕುಳ ನೀಡಬಾರದು. ಸಕಾಲ ರ‍್ಯಾಕಿಂಗ್ ಪದ್ಧತಿ ರದ್ದುಗೊಳಿಸಿ ಮುಕ್ತವಾಗಿ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು. ಕಚೇರಿ ವೇಳೆ ಹೊರೆತುಪಡಿಸಿ ಹೆಚ್ಚುವರಿ ಕೆಲಸದ ಒತ್ತಡ ಹಾಕಬಾರದು ಎಂದು ಆಗ್ರಹಿಸಿದರು.ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಗುಂಜಲಪ್ಪ ನಾಯಕ ಮಾತನಾಡಿದರು. ಕಂದಾಯ ನೌಕರರ ಸಂಘದ ತಾಲೂಕಾಧ್ಯಕ್ಷ ಚಂದ್ರಕಾಂತ ಮೇತ್ರಿ, ಉಪತಹಸೀಲ್ದಾರ್ ಸಂಗಮೇಶ ನಾಯಕ, ವೆಂಕಟೇಶ, ಕಂದಾಯ ನಿರೀಕ್ಷಕರಾದ ಭೀಮರಡ್ಡಿ, ಮಹೇಂದ್ರ ಹಿರೇಮಠ, ಬಸವರಾಜಗೌಡ, ಸರ್ಕಾರಿ ನೌಕರ ಸಂಘದ ಕ್ರೀಡಾ ಕಾರ್ಯದರ್ಶಿ ರಾಮನಗೌಡ ಸೇರಿ ಇತರರಿದ್ದರು.