ಬಂಗಾರು ತಿರುಪತಿ ದೇವಾಲಯದಲ್ಲಿ ಹುಂಡಿ ಕಳ್ಳತನ ಪ್ರಕರಣ

ಕನ್ನಡಪ್ರಭ ವಾರ್ತೆ ಬೇತಮಂಗಲ

ಬಂಗಾರು ತಿರುಪತಿ (ಗುಟ್ಟಹಳ್ಳಿ) ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ನಡೆದಿದ್ದ ಹುಂಡಿ ಎಣಿಕೆ ಕಾರ್ಯದ ವೇಳೆ ಹಣ ಕದಿಯುತ್ತಾ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ದೇವಾಲಯದ ನೌಕರನನ್ನು ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕಳೆದ ಜು.೧೬ರಂದು ದೇವಾಲಯದಲ್ಲಿ ಭಕ್ತರು ಕಾಣಿಕೆಯಾಗಿ ನೀಡಿದ್ದ ಹುಂಡಿ ಹಣದ ಎಣಿಕೆ ಕಾರ್ಯ ನಡೆಯುತ್ತಿತ್ತು. ದೇವಾಲಯದಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ಎಚ್.ಆರ್.ಮಂಜುನಾಥ್ ೩,೧೦೦ ರು.ಗಳನ್ನು ಕದ್ದು ತನ್ನ ಜೇಬಿಗೆ ಇಳಿಸಿಕೊಂಡಿದ್ದ. ಈತನ ಅನುಮಾನಾಸ್ಪದ ವರ್ತನೆ ಗಮನಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಸೇವಾಕರ್ತರು ತಕ್ಷಣವೇ ಆತನನ್ನು ತಪಾಸಣೆ ಮಾಡಿದಾಗ ಕಳ್ಳತನ ಬಯಲಾಗಿತ್ತು. ಅಲ್ಲದೆ, ಸಿಸಿಟಿವಿ ಕ್ಯಾಮೆರಾದಲ್ಲಿಯೂ ಆತ ಹಣ ಕದಿಯುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿತ್ತು. ಅಂದೇ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಜು.೨೭ರಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಅಧಿಕೃತ ಆದೇಶ (ಸಂಖ್ಯೆ: ೧೪/೨೦೨೬-೨೭) ಹೊರಡಿಸಿದ್ದಾರೆ.


ದೇವಾಲಯದ ಆಸ್ತಿ ಹಾಗೂ ಭಕ್ತರ ಕಾಣಿಕೆ ಹಣಕ್ಕೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ಕಠಿಣ ಕ್ರಮಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ಭ್ರಷ್ಟ ಸಿಬ್ಬಂದಿಗಳಿಂದ ದೇವಾಲಯದ ವ್ಯವಸ್ಥೆಗೆ ಕಳಂಕ ಅಂಟುತ್ತಿದ್ದು, ಈ ವಜಾ ಆದೇಶ ಉಳಿದವರಿಗೂ ಎಚ್ಚರಿಕೆಯ ಗಂಟೆಯಾಗಿದೆ.