ಸ್ವಾವಲಂಬಿ ಜೀವನಕ್ಕೆ ಉದ್ಯೋಗ ಅನಿವಾರ್ಯ

| Published : Apr 02 2025, 01:01 AM IST

ಸಾರಾಂಶ

ಆರ್ಥಿಕಾಭಿವೃದ್ದಿಗೆ ಉದ್ಯೋಗದ ಅಗತ್ಯತೆ ಇಂದು ಹೆಚ್ಚಾಗಿದೆ, ಉತ್ತಮ ಜೀವನ ನಡೆಸಲು ಕುಟುಂಬವೊಂದರಲ್ಲಿ ಒಬ್ಬರು ದುಡಿದರೆ ಸಾಲದು ಇಬ್ಬರು ಸಮಪಾಲು ಸಮಬಾಳು ಎಂಬಂತೆ ದುಡಿದರೆ ಸ್ವಾಭಿಮಾನಿ, ನೆಮ್ಮದಿಯ ಜೀವನ ನಡೆಸಲು ಸಹಕಾರಿ. ಸರ್ಕಾರಿ ಕಾಲೇಜಿನಲ್ಲಿ ಇಂದು ಉದ್ಯೋಗ ಮೇಳ ನಡೆಸುವ ಮೂಲಕ ವಿದ್ಯಾವಂತ ಮಹಿಳೆಯರಿಗೆ ನೆರವಾಗುವ ಪ್ರಯತ್ನ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಆಧುನಿಕತೆ ಬೆಳೆದಂತೆ ಪುರುಷ ಪ್ರಧಾನ ಸಮಾಜವೆಂಬ ಅಪವಾದ ದೂರವಾಗಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಶಿಕ್ಷಣದೊಂದಿಗೆ ಉದ್ಯೋಗ ಆಯ್ಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ನಗರದ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಇ.ಗಂಗಾಧರರಾವ್ ಹೇಳಿದರು.ನಗರದ ಸರ್ಕಾರಿ ಮಹಿಳಾ ಕಾಲೇಜಿನ ಉದ್ಯೋಗ ಕೋಶ ಹಾಗೂ ಭಾರತೀಯ ಕೌಶಲ್ಯ ಅಭಿವೃದ್ದಿಸಂಸ್ಥೆಯ ಸಹಯೋಗದೊಂದಿಗೆ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ‘ಮಹಿಳೆಯರಿಗಾಗಿಯೇ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಒಬ್ಬರ ದುಡಿಮೆ ಸಾಕಾಗದು

ಆರ್ಥಿಕಾಭಿವೃದ್ದಿಗೆ ಉದ್ಯೋಗದ ಅಗತ್ಯತೆ ಇಂದು ಹೆಚ್ಚಾಗಿದೆ, ಉತ್ತಮ ಜೀವನ ನಡೆಸಲು ಕುಟುಂಬವೊಂದರಲ್ಲಿ ಒಬ್ಬರು ದುಡಿದರೆ ಸಾಲದು ಇಬ್ಬರು ಸಮಪಾಲು ಸಮಬಾಳು ಎಂಬಂತೆ ದುಡಿದರೆ ಸ್ವಾಭಿಮಾನಿ, ನೆಮ್ಮದಿಯ ಜೀವನ ನಡೆಸಲು ಸಹಕಾರಿ. ಸರ್ಕಾರಿ ಕಾಲೇಜಿನಲ್ಲಿ ಇಂದು ಉದ್ಯೋಗ ಮೇಳ ನಡೆಸುವ ಮೂಲಕ ವಿದ್ಯಾವಂತ ಮಹಿಳೆಯರಿಗೆ ನೆರವಾಗುವ ಪ್ರಯತ್ನ ನಡೆಸಲಾಗಿದೆ ಎಂದರು.

ಕಾಲೇಜಿನ ಉದ್ಯೋಗ ಕೋಶದ ಸಂಚಾಲಕ ಪ್ರೊ.ಜಿ.ಎಂ.ಪ್ರಕಾಶ್ ಮಾತನಾಡಿ, ಸಮಾಜ ಬದಲಾಗಿದೆ, ಸಮಾಜದ ಎಲ್ಲ ರಂಗಗಳಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ, ಇಂದು ಎಸ್ಸೆಸ್ಸೆಲ್ಸಿ, ಪಿಯುಸಿ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡರೆ ಅದರಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.75 ಮಂದಿಗೆ ದೊರೆತ ಉದ್ಯೋಗ

ಉದ್ಯೋಗ ಮೇಳದಲ್ಲಿ ರಾಜ್ಯದ ಹೆಸರಾಂತ ಕಂಪನಿಗಳಾದ ಬೆಂಗಳೂರಿನ ಅಕ್‌ಚೆಂಚರ್, ಭಾಷ್, ಟೆಲಿಫರ್‌ಪಾರ್‌ಮೆನ್ಸ್ ಸೇರಿದಂತೆ ೧೦ಕ್ಕೂ ಹೆಚ್ಚಿನ ಕಂಫನಿಗಳು ಪಾಲ್ಗೊಂಡಿದ್ದವು. ಉದ್ಯೋಗ ಮೇಳದಲ್ಲಿ ೩೮೫ ಮಂದಿ ಮಹಿಳಾ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದು, ೭೫ ಮಂದಿ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದು, ಅವರಿಗೆ ಸ್ಥಳದಲ್ಳೇ ನೇಮಕಾತಿ ಆದೇಶ ನೀಡಲಾಯಿತು.

ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ.ಇ.ಸೌಮ್ಯ, ಉಪನ್ಯಾಸಕರಾದ ಕೆ.ಎಸ್.ವೇಣು, ಎನ್.ಪ್ರಕಾಶ್, ಪದ್ಮ, ಬೃಂದಾದೇವಿ, ರಜನಿ, ಮಂಜುಳಾ, ಡಾ.ರಮೇಶ್ ಹಾಜರಿದ್ದರು.