ಸಾರಾಂಶ
ಪಟ್ಟಣದಲ್ಲಿ ಯಾವುದೇ ಕೆಲಸ ಕಾರ್ಯ ಆಗಬೇಕೆಂದರೆ ಪ್ರತಿಯೊಂದಕ್ಕೂ ಆಡಳಿತಾಧಿಕಾರಿಯ ಅನುಮೋದನೆ ಬೇಕು ಎಂದು ಹಲವು ಕಾರ್ಯಗಳು ವಿಳಂಬವಾಗುತ್ತಿವೆ.
ಹೊಸಪೇಟೆ: ಕಮಲಾಪುರ ಪುರಸಭೆಯ ಸಭಾಂಗಣದಲ್ಲಿ ಬುಧವಾರ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತ ಎನ್.ಮಹಮ್ಮದ್ ಅಲಿ ಅಕ್ರಮ್ ಶಾ ₹20.55 ಲಕ್ಷ ಮೊತ್ತದ ಉಳಿತಾಯ ಬಜೆಟ್ ಮಂಡಿಸಿದರು.
ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2024-25ನೇ ಸಾಲಿನ ಅಂದಾಜು ₹22.56 ಕೋಟಿ ಮೊತ್ತದ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಆರಂಭಿಕ ನಗದು ₹18 ಲಕ್ಷ ಇದ್ದು, ರಾಜಸ್ವ ಖಾತೆಯಲ್ಲಿ ₹ 9 ಕೋಟಿ, ಪುರಸಭೆ ನಿಧಿ ₹6.47 ಕೋಟಿ, ಸರ್ಕಾರ ಇತರೆ ಇಲಾಖೆಗಳಿಗೆ ಪಾವತಿಸಿಬೇಕಾದ ಅಸಾಮಾನ್ಯ ಆದಾಯ ₹6.89 ಕೋಟಿ, ಒಟ್ಟು ₹22.56 ಕೋಟಿಯಲ್ಲಿ ₹22.35 ಕೋಟಿ ಖರ್ಚು ತೋರಿಸಲಾಗಿದೆ. ನೀರಿನ ವ್ಯವಸ್ಥೆ, ಬೀದಿದೀಪ, ಶೌಚಾಲಯ ನಿರ್ಮಾಣ, ನಿರ್ವಹಣೆ, ಕಸ ವಿಲೇವಾರಿ, ಸ್ವಚ್ಛತೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.ಪಟ್ಟಣದಲ್ಲಿ ಯಾವುದೇ ಕೆಲಸ ಕಾರ್ಯ ಆಗಬೇಕೆಂದರೆ ಪ್ರತಿಯೊಂದಕ್ಕೂ ಆಡಳಿತಾಧಿಕಾರಿಯ ಅನುಮೋದನೆ ಬೇಕು ಎಂದು ಹಲವು ಕಾರ್ಯಗಳು ವಿಳಂಬವಾಗುತ್ತಿವೆ. ಹಾಗಾಗಿ ಕಾಮಗಾರಿಗಳಾಗುತ್ತಿಲ್ಲ. ಕಚೇರಿಯಲ್ಲಿ ಒಂದು ಫೈಲ್‌ಗಾಗಿ ಜನರು ಅಲೆದಾಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲಭೂತ ಸೌಕರ್ಯಗಳಿಗೆ ಅನುಮೋದನೆ ನೀಡುವಂತೆ ಮುಖ್ಯಾಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಸದಸ್ಯರೆಲ್ಲರೂ ಒತ್ತಾಯಿಸಿದರು.
ಬಜೆಟ್‌ನ ಪ್ರತಿಯನ್ನು ಅಕೌಂಟೆಂಟ್ ಅರವಿಂದ್ ಓದಿದರು. ಎಂಜಿನಿಯರ್ ಹನುಮಂತಪ್ಪ ಮುಂದೆ ನಡೆಯುವ ಕಾಮಗಾರಿಗಳಿಗೆ ಅನುಮೋದನೆ ಪಡೆದರು. ಪುರಸಭೆ ಸದಸ್ಯರಾದ ಸಯ್ಯದ್ ಮುಕ್ತಿಯಾರ್ ಪಾಷಾ, ಮಾಳಗಿ ರಾಮಸ್ವಾಮಿ, ಗೋಪಾಲ್, ಜ್ಯೋತಿಬಾಯಿ, ರವಿಕುಮಾರ್, ಅಜಯ್, ರಾಜಾ, ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ, ಸಮುದಾಯಾಧಿಕಾರಿ ಮಂಜುನಾಥ ಇದ್ದರು.