ಕೆಂಪಯ್ಯನದೊಡ್ಡಿ ಸರ್ಕಾರಿ ಶಾಲಾ ಶಿಕ್ಷಣದಲ್ಲಿ ವಾಟ್ಸಾಪ್ ಕ್ರಾಂತಿ...!

| Published : Mar 14 2024, 02:07 AM IST

ಕೆಂಪಯ್ಯನದೊಡ್ಡಿ ಸರ್ಕಾರಿ ಶಾಲಾ ಶಿಕ್ಷಣದಲ್ಲಿ ವಾಟ್ಸಾಪ್ ಕ್ರಾಂತಿ...!
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷಾ ದಿನಗಳು ಸಮೀಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ತರಗತಿ ಮುಗಿದ ನಂತರ ವಿದ್ಯಾರ್ಥಿಗಳು ಮನೆಗೆ ತೆರಳಿ ಓದಿನಲ್ಲಿ ಆಸಕ್ತಿ ಹೆಚ್ಚಿಸುವಂತೆ ಮಾಡಲು ಶಿಕ್ಷಕರು ಶ್ರಮಿಸುತ್ತಿದ್ದು, 4 ಮತ್ತು 5ನೇ ತರಗತಿ, 6 ಮತ್ತು 7ನೇ ತರಗತಿಯ ಮಕ್ಕಳ ಗ್ರೂಪ್ ಮಾಡಿಕೊಂಡು ನಿತ್ಯ ಸಂದೇಶ ಹಾಕಿ ಓದಿನ ಮಹತ್ವನ್ನು ಮಕ್ಕಳಲ್ಲಿ ಬೆಳೆಸುತ್ತಿದ್ದಾರೆ.

ಎಚ್.ಎನ್. ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಲು ನೆರವಾಗುವಂತೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಕೆಂಪಯ್ಯನ ದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು ವಾಟ್ಸಾಪ್ ಗ್ರೂಪ್ ಮೂಲಕ ಮಕ್ಕಳಿಗೆ ಶಿಕ್ಷಣದ ಬಗ್ಗೆ ಒತ್ತು ನೀಡಲು ಮುಂದಾಗಿರುವುದು ಇತರರಿಗೂ ಮಾದರಿಯಾಗಿದೆ.

ಪರೀಕ್ಷಾ ದಿನಗಳು ಸಮೀಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ತರಗತಿ ಮುಗಿದ ನಂತರ ವಿದ್ಯಾರ್ಥಿಗಳು ಮನೆಗೆ ತೆರಳಿ ಓದಿನಲ್ಲಿ ಆಸಕ್ತಿ ಹೆಚ್ಚಿಸುವಂತೆ ಮಾಡಲು ಶಿಕ್ಷಕರು ಶ್ರಮಿಸುತ್ತಿದ್ದು, 4 ಮತ್ತು 5ನೇ ತರಗತಿ, 6 ಮತ್ತು 7ನೇ ತರಗತಿಯ ಮಕ್ಕಳ ಗ್ರೂಪ್ ಮಾಡಿಕೊಂಡು ನಿತ್ಯ ಸಂದೇಶ ಹಾಕಿ ಓದಿನ ಮಹತ್ವನ್ನು ಮಕ್ಕಳಲ್ಲಿ ಬೆಳೆಸುತ್ತಿದ್ದಾರೆ.

ಶಾಲೆಯ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ನಂಬರ್ ಪಡೆದು ವಾಟ್ಸಾಪ್ ಗ್ರೂಪ್ ರಚಿಸಿ ಯೋಗ ಮತ್ತು ಶಿಕ್ಷಣ ವಿಷಯವಾಗಿ ಪ್ರತಿದಿನ ಬೆಳಗಿನ ಜಾವ ಓದಿನಲ್ಲಿ ತೊಡಗುವಂತೆ ಸಂದೇಶ ಹಾಕುವ ಮೂಲಕ ಶಾಲೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಹೆಚ್ಚಿಸಲು ಮುಂದಾಗಿದ್ದಾರೆ.

ವಾರಕ್ಕೊಂದು ದಿನ ಯೋಗ ಅಭ್ಯಾಸ, ನಿತ್ಯ ಶಾಲೆ ಬಿಟ್ಟ ಸಂಜೆ ಶಾಲಾ ಆವರಣದಲ್ಲಿ ಗುಂಪುಗೂಡಿ ಮಕ್ಕಳು ಓದಿನಲ್ಲಿ ತೊಡಗುವಂತೆ ಮಾಡುವುದು, ಮಕ್ಕಳು ಗಿಡ ನೆಟ್ಟು ಬೆಳೆಸುವಂತೆ ಅರಿವು ಮೂಡಿಸುತ್ತಿರುವ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಶಾಲೆ ಮುಖ್ಯಶಿಕ್ಷಕ ಸುಂದರಪ್ಪ ಸೇರಿದಂತೆ ಶಾಲಾ ಶಿಕ್ಷಕರು, ಈ ಹಿಂದೆ ಮಹಾಮಾರಿ ಕೊರೋನಾ ಬಂದ ವೇಳೆಯು ದೃತಿಗೆಡದೆ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸಿ ಜಗಲಿ ಮೇಲೊಂದು ಪಾಠಶಾಲೆ ಪ್ರಾರಂಭಿಸಿ ಪಾಠ ಪ್ರವಚನ ಮಾಡುತ್ತಿದ್ದರು. ಈ ವಿಷಯ ತಿಳಿದ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಯಾವುದೇ ಮುನ್ಸೂಚನೆ ಹಾಗೂ ಮಾಹಿತಿ ನೀಡದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಶಿಕ್ಷಕ ವೃಂದಕ್ಕೆ ಅಭಿನಂದಿಸಿದ್ದನ್ನು ಸ್ಮರಿಸಬಹುದಾಗಿದೆ.

ಶಿಕ್ಷಕರ ನಡೆ ಮಕ್ಕಳ ಮನೆ ಕಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ನಿತ್ಯ ಮಕ್ಕಳು ಬೆಳಗ್ಗೆ 5 ಗಂಟೆಗೆ ಎದ್ದು ಓದುವುದು, ಬರೆಯುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಸಂಜೆ ಶಾಲೆ ಬಿಟ್ಟ ಮೇಲೆ ತಮ್ಮ ಮನೆ ಜಗುಲಿ ಮೇಲೆ ಕುಳಿತು ಓದುವ ಬರೆಯುವ ಅಭ್ಯಾಸ ಬೆಳೆಸಿಕೊಂಡು ಬಂದಿದ್ದಾರೆ. ಶಾಲೆಯ ಎಲ್ಲಾ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಉತ್ಸಾಹರಾಗಿ ಕೆಲಸ ಮಾಡುತ್ತಿದ್ದಾರೆ. ಶಾಲೆಯು ಬೌದ್ಧಿಕವಾಗಿ ಅಭಿವೃದ್ಧಿ ಸಾಧಿಸುತ್ತಿದೆ.

ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಜೊತೆ ಸೇರಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಬೆಳಗಿನ ಜಾವ ವಿದ್ಯಾರ್ಥಿಗಳು ಬೇಗ ಎದ್ದು ಓದಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರು ತಮ್ಮ ಭಾವಚಿತ್ರವನ್ನು ತೆಗೆದು ವಾಟ್ಸಾಪ್‌ಗೆ ಹಾಕುವಂತೆ ಸೂಚಿಸಲಾಗಿದೆ. ಇದಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

-ಸುಂದರಪ್ಪ, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು. ಶಾಲೆಯಲ್ಲೇ ಕೈತೋಟ ನಿರ್ಮಿಸಿ ತರಕಾರಿ, ಸೊಪ್ಪು ಬೆಳೆದು ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಗ್ರಾಮಸ್ಥರು, ವಿದ್ಯಾರ್ಥಿಗಳ ಪೋಷಕರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ರಾಗಿ, ಹುರುಳಿ, ಅವರೆ ಕಾಳು, ತರಕಾರಿಗಳನ್ನು ಮಕ್ಕಳ ಮಧ್ಯಾಹ್ನ ಊಟಕ್ಕೆ ನೀಡುತ್ತಿರುವುದು ಶ್ಲಾಘನೀಯ.

-ಕೆ.ಪಿ.ಜಯಶಂಕರ್, ಎಸ್ ಡಿಎಂಸಿ ಅಧ್ಯಕ್ಷರುಸರ್ಕಾರಿ ಶಾಲೆಗೆ ನಂದಿಪುರ, ಗುಂಡಾಪುರ, ದಳವಾಯಿ ಕೋಡಿಹಳ್ಳಿ ಸೇರಿದಂತೆ ಹಲವು ಮಕ್ಕಳು ಬರುತ್ತಿದ್ದಾರೆ. ಮಕ್ಕಳ ಮನೆ ಪ್ರಾರಂಭಿಸಿದ್ದು, 20 ವಿದ್ಯಾರ್ಥಿಗಳು ಎಲ್ಕೆಜಿ ಮತ್ತು ಯುಕೆಜಿ ಇಂಗ್ಲಿಷ್ ವ್ಯಾಸಂಗ ಪಡೆಯುತ್ತಿದ್ದಾರೆ. ಶಾಲೆಗೆ ಕಾಯಂ ಶಿಕ್ಷಕರ ನೇಮಕ ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.

-ಮೋಹನ್ ಕುಮಾರ್, ಯುವ ಮುಖಂಡರು.