ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ತಾಲೂಕಿನ ಕಡಮಲಕುಂಟೆ ಗ್ರಾಮದಲ್ಲಿ ನೂತನವಾಗಿ ತೆರೆಯಲಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹಾಲು ಶೇಖರಣಾ ಘಟಕದ ಪ್ರಾರಂಭೋತ್ಸವಕ್ಕೆ ಶಾಸಕ, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಚಾಲನೆ ನೀಡಿದರು.
ಕನ್ನಡಪ್ರಭವಾರ್ತೆ ಪಾವಗಡ
ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ತಾಲೂಕಿನ ಕಡಮಲಕುಂಟೆ ಗ್ರಾಮದಲ್ಲಿ ನೂತನವಾಗಿ ತೆರೆಯಲಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹಾಲು ಶೇಖರಣಾ ಘಟಕದ ಪ್ರಾರಂಭೋತ್ಸವಕ್ಕೆ ಶಾಸಕ, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಚಾಲನೆ ನೀಡಿದರು.ಇದೇ ವೇಳೆ ಶಾಸಕರಾದ ಎಚ್.ವಿ.ವೆಂಕಟೇಶ್ ಮಾತನಾಡಿ, ಮಹಿಳೆಯರ ಪ್ರಗತಿಗೆ ವಿವಿಧ ಯೋಜನೆ ಅಡಿ ಸರ್ಕಾರ ಅನೇಕ ಯೋಜನೆ ರೂಪಿಸಿದ್ದು ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಸಾಮಾಜಿಕ ಸಬಲರಾಗಬೇಕು. ಈ ಹಿನ್ನಲೆ ಸ್ವಾವಲಂಬನೆ ಜೀವನ ನಡೆಸಲು ಸಹಕಾರ ಸಂಘಗಳು ಪೂರಕವಾಗಿವೆ.ಕಡಮಲಕುಂಟೆ ಗ್ರಾಮದಲ್ಲಿ ತೆರೆದಿದ್ದ ಈ ನೂತನ ಮಹಿಳಾ ಸಹಕಾರ ಸಂಘವು ಇನ್ನು ಹೆಚ್ಚಿನ ಎತ್ತರಕ್ಕೆ ಬೆಳೆದು, ಪ್ರತಿಯೊಬ್ಬ ಸದಸ್ಯರ ಆರ್ಥಿಕ ಪ್ರಗತಿಗೆ ಆಸರೆಯಾಗಲಿ ಎಂದರು.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಎರಡು ವರ್ಷಗಳಲ್ಲಿ ತಾಲೂಕಿನಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಕೇಳಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನ ಅಭಿವೃದ್ಧಿಗೆ ಅಗತ್ಯವಿರುವ ಪಟ್ಟಿಯನ್ನು ಶೀಘ್ರವೇ ಸಲ್ಲಿಸಲಾಗುವುದು.ನಮ್ಮ ತಂದೆ ದಿವಂಗತ ಮಾಜಿ ಸಚಿವ ವೆಂಕಟರಮಣಪ್ಪ ಅವರು,ಹಾಗೂ ನಾನು ಈ ಗ್ರಾಮದ ಅಭಿವೃದ್ಧಿಗೆ ಸದಾ ಶ್ರಮಿಸಿದ್ದೇವೆ. ಗ್ರಾಮಸ್ಥರು ಸಲ್ಲಿಸಿರುವ ಮನವಿ ಪರಿಗಣಿಸಿ ಪ್ರಮುಖ ಅಗತ್ಯತೆಗಳನ್ನು ಈಡೇರಿಸುವ ಭರವಸೆ ವ್ಯಕ್ತಪಡಿಸಿದರು.ನೂತನ ಸಂಘದಿಂದ ಹಾಲು ಉತ್ಪಾದಕರಿಗೆ,ವಿಶೇಷವಾಗಿ ಮಹಿಳೆಯರಿಗೆ ಸಾಲ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿಸುವುದಾಗಿ ಹೇಳಿದರು.ತುಮುಲ್ ಒಕ್ಕೂಟದ ನಿರ್ದೇಶಕರಾದ ಚೆನ್ನಮಲ್ಲಯ್ಯ ಮಾತನಾಡಿ,ತುಮುಲ್ ವತಿಯಿಂದ ಹಾಲು ಉತ್ಪಾದಕರಿಗೆ ಹಲವಾರು ಪೂರಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಮೆಗಾ ಡೈರಿಯನ್ನು ಪ್ರಾರಂಭಿಸಲಾಗುವುದು. ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿದ್ಯಾರ್ಥಿನಿಲಯ ಸೇರಿದಂತೆ ಹಲವು ಸೌಲತ್ತುಗಳಿವೆ.ಉತ್ಪಾದಕರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಿ ಸಂಘದ ಪ್ರಗತಿಗೆ ಸಹಕರಿಸಬೇಕು ಎಂದು ತಿಳಿಸಿದರು.ಇದೇ ವೇಳೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶೇಷಗಿರಿ,ಗುತ್ತಿಗೆದಾರರಾದ ಆರ್.ಎ. ಹನುಮಂತರಾಯಪ್ಪ, ಸುಬ್ಬರಾಯಪ್ಪ,ತಾಪಂ ಮಾಜಿ ಉಪಾಧ್ಯಕ್ಷ ಐ.ಜಿ. ನಾಗರಾಜ್, ಪುರಸಭೆ ಮಾಜಿ ಸದಸ್ಯ ರವಿ,ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಶಿವಮೂರ್ತಿ, ಗ್ರಾಪಂ ಮಾಜಿ ಸದಸ್ಯ ಗೋರಸ್ ಮಾವು ಹನುಮಂತರಾಯಪ್ಪ,ಮುಖಂಡರಾದ ನಾಗಭೂಷಣ್,ಧರ್ಮಪಾಲಯಾದವ್, ಓಬಳೇಶಪ್ಪ,ರಾಮಾಂಜಿನಪ್ಪ,ವಕೀಲರಾದ ಹನುಮಂತರಾಯಪ್ಪ ಮತ್ತು ಶ್ರೀರಾಮಪ್ಪ,ಸಂಘದ ಅಧ್ಯಕ್ಷೆ ಲಕ್ಷ್ಮಮ್ಮ,ಉಪಾಧ್ಯಕ್ಷೆ ವಿಜಯಲಕ್ಷ್ಮಿ,ಸಂಘದ ಎಲ್ಲಾ ನಿರ್ದೇಶಕರು, ಸ್ಥಳೀಯ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಇದ್ದರು.