ಹಾನಗಲ್ಲ: ಔದ್ಯೋಗಿಕ ಅವಕಾಶಗಳೊಂದಿಗೆ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದಲ್ಲಿ ಕುಟುಂಬದ ಸೌಖ್ಯ, ಆರ್ಥಿಕ ಹಿತವೂ ಸೇರಿ ಸಮಾಜಲ್ಲಿ ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಿದಂತಾಗುತ್ತದೆ ಎಂದು ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸಂಟ್ ಜೋಯ್ಸ ತಿಳಿಸಿದರು.

ಸೋಮವಾರ ಇಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರ ಆಯೋಜಿಸಿದ ಹೊಲಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಯಂ ಉದ್ಯೋಗಕ್ಕೆ ಈಗ ಪಕ್ವವಾದ ಕಾಲವಾಗಿದೆ. ದುಡಿಯುವವರು ಮತ್ತು ಪರಿಶ್ರಮಿಸುವವರಿಗೆ ಮಾತ್ರ ಉತ್ತಮ ಆದಾಯ ಕಂಡುಕೊಳ್ಳುವ ಕಾಲ ಇದಾಗಿದೆ. ಕಲಿಕೆಗಾಗಿ ಬಂದವರಿಗೆ ಉತ್ಸಾಹ, ಉತ್ತಮ ಉದ್ದೇಶವಿರಲಿ. ಹಾನಗಲ್ಲ ತಾಲೂಕಿನ ಆಸಕ್ತ ಪ್ರತಿ ಯುವಕ, ಯುವತಿಯರು ಸ್ವಯಂ ಉದ್ಯೋಗಿಗಳಾಗಬೇಕು ಎಂಬ ನೀರಿಕ್ಷೆ ಶಾಸಕ ಶ್ರೀನಿವಾಸ ಮಾನೆಯವರದಾಗಿದ್ದು, ಆ ಕಾರಣಕ್ಕಾಗಿಯೇ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ವಿವಿಧ ತರಬೇತಿಗಳನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಿದ್ದಾರೆ. ಇದರ ಸದುಪಯೋಗಕ್ಕೆ ಮುಂದಾಗಿ ಎಂದು ಕರೆ ನೀಡಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ, ಆರೀ ಕಲೆ, ಬ್ಯೂಟಿಷಿಯನ್, ಟೈಲರಿಂಗ ಸೇರಿದಂತೆ ಮಹಿಳೆಯರಿಗಾಗಿ ಪರಿವರ್ತನ ಕಲಿಕಾ ಕೇಂದ್ರ ನಿರಂತರ ಉಚಿತ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ವಿಶೇಷವಾಗಿ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಹತ್ತು ಹಲವು ಶೈಕ್ಷಣಿಕ ತರಬೇತಿ, ಉದ್ಯೋಗಾವಕಾಶಕ್ಕಾಗಿ ಐಎಸ್, ಕೆಎಎಸ್, ವಿವಿಧ ಸರ್ಕಾರಿ ಉದ್ಯೋಗಗಳಿಗಾಗಿ ತರಬೇತಿ, ಉದ್ಯೋಗ ಮಾರ್ಗದರ್ಶನ ನಿರಂತರವಾಗಿ ನಡೆಯುತ್ತಿವೆ. ಸಾವಿರಾರು ಯುವಕ ಯುವತಿಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಆರೀ ಕಲೆ, ಮತ್ತು ಬ್ಯೂಟಿಶಿಯನ್ ತರಬೇತಿ ನೀಡುವ ಉದ್ದೇಶ ನಮ್ಮ ಸಂಸ್ಥೆಗಿದೆ ಎಂದರು.

ಟೈಲರಿಂಗ ತರಬೇತಿದಾರರಾದ ವೀಣಾ ಕೋರಿಶೆಟ್ಟರ, ಶೀಲಾವತಿ ಹೆಗಡೆ ವೇದಿಕೆಯಲ್ಲಿದ್ದರು. ಲೋಹಿತ ಕಾಟಣ್ಣನವರ ಸ್ವಾಗತಿಸಿದರು. ಶೋಭಾ ಗರಡೇರ ಕಾರ್ಯಕ್ರಮ ನಿರೂಪಿಸಿದರು. ರಮೇಶ ಬಾರ್ಕಿ ವಂದಿಸಿದರು.