ಶಿಕ್ಷಣದಿಂದ ಮಹಿಳೆಯರ ಸಬಲೀಕರಣ

| Published : Mar 13 2024, 02:02 AM IST

ಸಾರಾಂಶ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡರೂ ಇನ್ನೂ ಸ್ವತಂತ್ರಳಾಗಿಲ್ಲ ಎಂಬುದು ಖೇದಕರ ಸಂಗತಿ.

ಕನ್ನಡ ಪ್ರಭ ವಾರ್ತೆ ಮುಧೋಳ

ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೊಂದೆ ರಹದಾರಿ. ಈಚೆಗೆ ಉನ್ನತ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ. ಶಿಕ್ಷಣ ಮಹಿಳೆಯರನ್ನು ಸಶಕ್ತರನ್ನಾಗಿಸಲು ಸಹಕಾರಿಯಾಗಿದೆ. ಶಿಕ್ಷಣದಿಂದ ಆತ್ಮ ವಿಶ್ವಾಸ ಹೆಚ್ಚಲಿದೆ. ಬದುಕು ನಿಯಂತ್ರಿಸಲು, ದೃಢ ನಿರ್ಧಾರ ಕೈಗೊಳ್ಳಲು ಶಿಕ್ಷಣ ಸಹಕಾರಿಯಾಗಿದೆ ಎಂದು ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಹೇಳಿದರು.

ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಂಗಳವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಭಾರತೀಯ ಸಂಪ್ರದಾಯದಲ್ಲಿ ಮಹಿಳೆಗೆ ವಿಶೇಷ ಮತ್ತು ಉನ್ನತ ಸ್ಥಾನ ಇದೆ. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೊ ಅಲ್ಲಿ ದೈವತ್ವವು ಅರಳುತ್ತದೆ. ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ ಮಹಿಳೆಯರಿದ್ದಾರೆ. ಶೇ.50 ರಷ್ಟು ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದರೆ ನಮ್ಮ ಭಾರತ ದೇಶವು ಎಷ್ಟು ಸಬಲವಾಗುತ್ತದೆ ಎಂಬುದನ್ನು ನಾವಿಂದು ಊಹಿಸಬಹುದು ಎಂದರು.

ಇಂದು ಮಹಿಳೆಯರು ಶಿಕ್ಷಣ, ವೈದ್ಯಕೀಯ, ರಾಜಕೀಯ, ಕ್ರೀಡೆ, ಸಾಮಾಜಿಕ, ಸಾಪ್ಟವೇರ್, ವಿಜ್ಞಾನ, ತಂತ್ರಜ್ಞಾನ, ಸಿನಿಮಾ, ಉದ್ಯಮ, ಸೇನೆ, ಬಾಹ್ಯಾಕಾಶ, ಕೃಷಿ, ಆಡಳಿತ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಹೆಜ್ಜೆ ಹಾಕಿರುವುದು ಹೆಮ್ಮೆ ಮತ್ತು ಅಭಿಮಾನ ಸಂಗತಿ. ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದು ಸಾಧಿಸಿ ತೋರಿಸಿದ್ದಾಳೆ, ತೋರಿಸುತ್ತಿದ್ದಾಳೆ ಎಂದರು.

ಸ್ಥಳೀಯ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ರೇಖಾಮನಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡರೂ ಇನ್ನೂ ಸ್ವತಂತ್ರಳಾಗಿಲ್ಲ ಎಂಬುದು ಖೇದಕರ ಸಂಗತಿ. ಸಮಾಜದ ವ್ಯವಸ್ಥೆಯಲ್ಲಿ ಮಹಿಳೆಯರು ಬದುಕು ಸಾಗಿಸುವುದು ಕಷ್ಟಕರ. ಸಮಾಜವನ್ನು ಎದುರಿಸಿ ಮುನ್ನುಗ್ಗುವುದು ಅವಳಿಗೊಂದು ಸವಾಲು ಆಗಿದೆ ಎಂದರು.

ಐಕ್ಯೂಎಸಿ ಸಂಯೋಜಕಿ ಪ್ರೊ.ಶಾರದಾ ಎಸ್. ಬಿರಾದಾರ ವೇದಿಕೆ ಮೇಲೆ ಇದ್ದರು. ವಿದ್ಯಾ ರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಕಾರ್ಯಾಧ್ಯಕ್ಷೆ ಪ್ರೊ.ಸುಷ್ಮೀತಾ ಮುರಗೋಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ವಿದ್ಯಾ ಎಸ್. ಶಿಂಧೆ ಮತ್ತು ಪ್ರೊ.ಕವಿತಾ ಎಸ್. ಶಿವಪ್ಪಯ್ಯನಮಠ ಅತಿಥಿಗಳನ್ನು ಪರಿಚಯಿಸಿದರು, ಪ್ರೊ.ವೀಣಾ ಎಸ್.ಸಾಲಿಮಠ ನಿರೂಪಿಸಿದರು, ಪ್ರೊ.ಲಕ್ಷ್ಮೀ ಎಸ್.ಬಿರಾದಾರ ವಂದಿಸಿದರು, ವಿದ್ಯಾರ್ಥಿನಿ ಅಂಭುಜಾ ಮನಗೂಳಿ ಪ್ರಾರ್ಥನೆ ಹೇಳಿದರು. ಕಾಲೇಜಿನ ಮಹಿಳಾ ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಇದ್ದರು.