ಹೋಟೆಲ್‌ಗಳಲ್ಲಿ ಖಾಲಿ ಲೋಟದ ಸ್ವಾಗತ!

| Published : Mar 12 2024, 02:04 AM IST

ಸಾರಾಂಶ

ಬೆಂಗಳೂರಿನ ಹೋಟೆಲ್‌ನಲ್ಲಿ ಗ್ರಾಹಕರನ್ನು ಖಾಲಿ ಲೋಟ ನೀಡಿ ಸ್ವಾಗತಿಸಲಾಗುತ್ತಿದೆ. ನೀರಿನ ಮಿತ ಬಳಕೆಗಾಗಿ ಜಗ್ಗಲ್ಲಿ ನೀರು ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೀರಿನ ತುಟಾಗ್ರತೆಯ ಬಿಸಿ ರಾಜಧಾನಿಯ ಹೋಟೆಲ್‌ಗಳಿಗೂ ಮುಟ್ಟಿದೆ. ಪರಿಣಾಮ ನೀರಿನ ಮಿತ ಬಳಕೆಗೆ ಮುಂದಾಗಿರುವ ರಾಜಧಾನಿಯ ಹೋಟೆಲ್‌ಗಳು ಇದೀಗ ಗ್ರಾಹಕರಿಗೆ ಖಾಲಿ ಲೋಟದ ಸ್ವಾಗತ ಕೋರುತ್ತಿವೆ!

ಗ್ರಾಹಕರು ಬಂದ ತಕ್ಷಣ ಹೋಟೆಲ್‌ ಪರಿಚಾರಕರು ನೀರು ತುಂಬಿದ ಲೋಟಗಳನ್ನಿಟ್ಟು ಆರ್ಡರ್‌ ಕೇಳುವುದು ಸಾಮಾನ್ಯ. ಆದರೆ, ಈಗ ಬಹುತೇಕ ಹೋಟೆಲ್‌ಗಳು ಈ ಸಂಪ್ರದಾಯಕ್ಕೆ ಮಂಗಳ ಹಾಡುತ್ತಿವೆ. ಕೇವಲ ಲೋಟಗಳನ್ನು ಮಾತ್ರ ಇಡುವುದು, ಜಗ್‌ನಲ್ಲಿ ನೀರಿಟ್ಟು ಬೇಕಾದಷ್ಟು ಮಾತ್ರ ಬಳಸಿ ಎಂದು ಹೇಳಲಾಗುತ್ತಿದೆ. ನೀರಿನ ಪೋಲು ತಡೆಯಲು ಇಂತಹ ಸಣ್ಣ ವಿಚಾರಗಳಲ್ಲೂ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ.

ಕೈ ತೊಳೆಯುವಲ್ಲಿ ಮಿತವಾಗಿ ನೀರು ಪೋಲು ಮಾಡುವಂತೆ ಸೂಚನಾ ಪತ್ರ ಹಾಕುತ್ತಿವೆ. ಜೊತೆಗೆ ತಟ್ಟೆ ತೊಳೆಯುವ ನೀರು ಉಳಿಸಲು ಸ್ಟೀಲ್‌ ತಟ್ಟೆ, ಚಮಚಗಳ ಬದಲಾಗಿ ಪೇಪರ್ ತಟ್ಟೆ, ಅಡಿಕೆ ಹಾಳೆಯ ತಟ್ಟೆಗಳನ್ನು ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ನಿಸರ್ಗ ಹೋಟೆಲ್‌ ಮಾಲೀಕ ಕೃಷ್ಣರಾವ್‌, ನೀರಿನ ಮಹತ್ವ ಈಗ ಎಲ್ಲರಿಗೂ ಗೊತ್ತಾಗುತ್ತಿದೆ. ಹದಿನೈದು ದಿನಗಳ ಅಂತರದಲ್ಲೇ ಜಲಮೂಲಗಳು ಬತ್ತಿವೆ. ಹೀಗಾಗಿ ಹೋಟೆಲ್‌ಗಳಲ್ಲಿ ನೀರನ್ನು ಉಳಿಸಲು ಸಣ್ಣ ಸಂಗತಿಗಳ ಮೇಲೆಯೂ ಗಮನ ಹರಿಸಬೇಕಾಗಿದ್ದು, ಲೋಟಗಳಲ್ಲಿ ಇಟ್ಟ ನೀರನ್ನು ಹೆಚ್ಚಿನ ಗ್ರಾಹಕರು ಕುಡಿಯುವುದೇ ಇಲ್ಲ. ಹೀಗಾಗಿ ಅದನ್ನು ಉಳಿಸಲು, ಅಗತ್ಯವಿದ್ದಲ್ಲಿ ಅವರೇ ನೀರು ಬಳಸಲು ಜಗ್‌ನಲ್ಲಿ ನೀರು ಕೊಡಲಾತ್ತಿದೆ ಎಂದು ತಿಳಿಸಿದರು.

ಹಳೇ ವಾರ್ಡ್‌ಗಳಲ್ಲಿ ಹೊಸ ಬೋರ್‌ಗೆ ಯೋಜನೆಕನ್ನಡಪ್ರಭ ವಾರ್ತೆ ಬೆಂಗಳೂರುಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳು ಸೇರಿದಂತೆ ಹೊಸ ಪ್ರದೇಶಗಳನ್ನು ಹೊರತುಪಡಿಸಿ ಹಳೇ ವಾರ್ಡ್‌ಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆಬಾವಿ ದುರಸ್ತಿ ಹಾಗೂ ಹೊಸ ಕೊಳವೆಬಾವಿಗಳನ್ನು ಕೊರೆಯಲು ರೂಪಿಸಿರುವ ₹37.5 ಕೋಟಿ ಮೊತ್ತದ ಕ್ರಿಯಾಯೋಜನೆ ಪ್ರಕಾರ ಕಾರ್ಯನಿರ್ವಹಿಸುವಂತೆ ಜಲಮಂಡಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.ದಿನದಿಂದ ದಿನಕ್ಕೆ ನಗರದಲ್ಲಿ ಉಲ್ಬಣವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಮತ್ತು ಜಲಮಂಡಳಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ 110 ಹಳ್ಳಿಗಳನ್ನು ಹೊರತುಪಡಿಸಿ ಹಳೇ ವಾರ್ಡ್‌ಗಳಲ್ಲಿ ಅಗತ್ಯವಿರುವಲ್ಲಿ ಹೊಸದಾಗಿ ಕೊಳೆವೆ ಬಾವಿ ಕೊರೆಯುವ ಹಾಗೂ ದುರಸ್ತಿ ಮಾಡಿ ಸರಿಪಡಿಸಲು ಕ್ರಿಯಾಯೋಜನೆ ರೂಪಿಸಿದೆ.ಕ್ರಿಯಾಯೋಜನೆಯಂತೆ ಹೆಬ್ಬಾಳ, ಸರ್ವಜ್ಞನಗರ, ಪುಲಕೇಶಿನಗರ, ಗಾಂಧಿನಗರ, ಬಿಟಿಎಂ ಲೇಔಟ್‌, ಪದ್ಮನಾಭನಗರ, ಜಯನಗರ, ವಿಜಯನಗರ, ಬಸವನಗುಡಿ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 28 ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕಾಮಗಾರಿ ಕೈಗೊಳ್ಳಲು ಹಣವನ್ನೂ ಬಿಬಿಎಂಪಿ ಈಗಾಗಲೇ ಜಲಮಂಡಳಿಗೆ ಬಿಡುಗಡೆ ಮಾಡಿದೆ.