ಕುಡುಕರ ಅಡ್ಡೆಯಾಗುತ್ತಿವೆ ಖಾಲಿ ನಿವೇಶನಗಳು !

| Published : Apr 21 2025, 12:56 AM IST

ಸಾರಾಂಶ

ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಖಾಲಿ ನಿವೇಶನಗಳು ಹೆಚ್ಚುತ್ತಿದ್ದು, ಈ ಹಿಂದಿನ ನಿವೇಶನಗಳಲ್ಲಿ ಜನರು ಮನೆ ನಿರ್ಮಿಸಿಕೊಳ್ಳದಿರುವುದರಿಂದ ತ್ಯಾಜ್ಯ ವಸ್ತು, ಮುಳ್ಳುಕಂಟಿಗಳಿಂದ ಆವೃತವಾಗಿ ಪಟ್ಟಣದ ಅಂದ ಕೆಡೆಸುತ್ತಿವೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಅಮೀನಗಡ

ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಖಾಲಿ ನಿವೇಶನಗಳು ಹೆಚ್ಚುತ್ತಿದ್ದು, ಈ ಹಿಂದಿನ ನಿವೇಶನಗಳಲ್ಲಿ ಜನರು ಮನೆ ನಿರ್ಮಿಸಿಕೊಳ್ಳದಿರುವುದರಿಂದ ತ್ಯಾಜ್ಯ ವಸ್ತು, ಮುಳ್ಳುಕಂಟಿಗಳಿಂದ ಆವೃತವಾಗಿ ಪಟ್ಟಣದ ಅಂದ ಕೆಡೆಸುತ್ತಿವೆ. ಇನ್ನೂ ಹೊರವಲಯದಲ್ಲಿರುವ ಹೊಸದಾಗಿ ನಿರ್ಮಿತವಾದ ನಿವೇಶಗಳು ಕುಡುಕರ ಅಡ್ಡೆಗಳಾಗುತ್ತಿವೆ. ಸಂಜೆ 7 ಗಂಟೆಯಾದರೆ ಸಾಕು ಖಾಲಿ ನಿವೇಶನಗಳ ಕಡೆಗೆ ಬೈಕ್‌ಗಳ ಮೂಲಕ 3-4 ಜನರ ತಂಡ ಮದ್ಯದ ಬಾಟಲಿ, ಪ್ಲಾಸ್ಟಿಕ್ ಗ್ಲಾಸು, ನೀರಿನ ಬಾಟಲಿ ಸ್ನ್ಯಾಕ್ಸ್ ಗಳ ಜೊತೆಗೆ ಆಗಮಿಸಿ ರಾತ್ರಿ 10-11 ಗಂಟೆಯವರೆಗೆ ಪಾರ್ಟಿ ಮಾಡುತ್ತಾರೆ. ಊರಿನ ಒಳಗಡೆ ಸರಕಾರಿ ಶಾಲೆಗಳ ಸಂದಿಗೊಂದಿಗಳು, ಪಶು ಆಸ್ಪತ್ರೆ, ಸರಕಾರಿ ಕಚೇರಿಗಳ ಕತ್ತಲ ಸ್ಥಳ, ಪಾಳುಬಿದ್ದ ದೇವಸ್ಥಾನ, ವಿದ್ಯುತ್ ಬೆಳಕಿಲ್ಲದ ಸ್ಥಳಗಳೇ ಮದ್ಯಪ್ರಿಯರ ನೆಚ್ಚಿನ ತಾಣಗಳಾಗಿವೆ.ಇದು ಕೇವಲ ಅಮೀನಗಡ ಪಟ್ಟಣ ಮಾತ್ರವಲ್ಲ, ಅಮೀನಗಡ ಸುತ್ತಮುತ್ತಲ ಗ್ರಾಮ, ಪ್ರವಾಸಿ ಹಾಗೂ ಧಾರ್ಮಿಕ ತಾಣಗಳ ಖುಲ್ಲಾ ಜಾಗೆಗಳಲ್ಲೂ ರಾತ್ರಿ ಗುಂಡು ಪಾರ್ಟಿಗಳು ನಡೆಯುತ್ತಿವೆ. ಇದು ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ಗೊತ್ತಿದ್ದರೂ ಜಾಣ ಕುರುಡರಂತಿದ್ದಾರೆ. ಖಾಲಿ ನಿವೇಶನಗಳು ತ್ಯಾಜ್ಯಗಳ ಎಸೆಯುವ ತಿಪ್ಪೆಯಾಗಿ ಮಾರ್ಪಾಡಾಗುತ್ತಿವೆ. ಇದು ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳವಾಗಿರುವುದರಿಂದ ಪಟ್ಟಣ ಪಂಚಾಯತಿಯಾಗಲಿ, ಪರಿಸರ ಇಲಾಖೆಯಾಗಲಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಥ ಚಟುವಟಿಕೆಗಳ ಮೂಲಕ ಕಳ್ಳರು, ದರೋಡೆಕೋರರು ಗುಂಡುಪಾರ್ಟಿಯ ನೆಪದಲ್ಲಿ ತಡರಾತ್ರಿ ಮನೆಗಳಿಗೆ ನುಗ್ಗಿ ಕಳ್ಳತನ, ದರೋಡೆ ಮಾಡುವ ಸಂಭವವೂ ಇದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.