ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚುತ್ತಿದ್ದು, ಮರ್ಯಾದಾ ಹತ್ಯೆಯಂತಹ ಕೃತ್ಯಗಳನ್ನು ತಡೆಯಲು ಧಾರವಾಡದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾದ ಮಾನ್ಯ ಹೆಸರನ್ನಿಟ್ಟು, ಮರ್ಯಾದಾ ಹತ್ಯೆ ನಿಷೇಧಕ್ಕೆ ಕಠಿಣ ಕಾಯ್ದೆ ರೂಪಿಸುವಂತೆ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಒತ್ತಾಯಿಸಿದರು.
ದಾವಣಗೆರೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚುತ್ತಿದ್ದು, ಮರ್ಯಾದಾ ಹತ್ಯೆಯಂತಹ ಕೃತ್ಯಗಳನ್ನು ತಡೆಯಲು ಧಾರವಾಡದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾದ ಮಾನ್ಯ ಹೆಸರನ್ನಿಟ್ಟು, ಮರ್ಯಾದಾ ಹತ್ಯೆ ನಿಷೇಧಕ್ಕೆ ಕಠಿಣ ಕಾಯ್ದೆ ರೂಪಿಸುವಂತೆ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಾತಿ ವೈಷಮ್ಯ ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದ್ದು, ಇದೊಂದು ರೀತಿ ಜಾತಿ ಭಯೋತ್ಪಾದನೆಯಾಗಿದೆ. ಜಾತಿ ವಿನಾಶಕ್ಕೆ ಅಥವಾ ಜಾತಿ ಆದಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್ಜಾತಿ ವಿವಾಹಗಳು ಪರಿಹಾರವಾಗಿ ಎಂಬುದನ್ನು ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಕರಾರುವಕ್ಕಾಗಿ ಪ್ರತಿಪಾದಿಸಿದ್ದರು ಎಂದರು.ಅಂತರ್ಜಾತಿ ವಿವಾಹವನ್ನು ಅನುಷ್ಟಾನಗೊಳಿಸಲು ಬಸವಣ್ಣನವರು, ಡಾ.ಅಂಬೇಡ್ಕರ್ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದವರು. ವಿಪರ್ಯಾಸವೆಂದರೆ ಅಂತರ್ಜಾತಿ ವಿವಾಹಗಳನ್ನು ಒಪ್ಪಲಾರದ ಜಾತಿಯತೆಯ ರೋಗ ಪೀಡಿತ ಮನಸ್ಥಿತಿಯು ವಿಜ್ಞಾನ ಯುಗದಲ್ಲೂ ಮಂದುವರಿದಿದ್ದಲ್ಲದೇ, ಹೆಚ್ಚುತ್ತಲೇ ಇದೆ. ಇದು ಸಮ ಸಮಾಜ ನಿರ್ಮಾಣದ ಎಲ್ಲಾ ಬಗೆಯ ಪ್ರಯತ್ನಗಳನ್ನೂ ಹತ್ತಿಕ್ಕಿ ಬಿಡುತ್ತದೆ ಎಂದು ಹೇಳಿದರು.
ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಮಾತನಾಡಿ, ಮರ್ಯಾದಾ ಹತ್ಯೆಯಂತಹ ಕೃತ್ಯಕ್ಕೆ ಕೈಹಾಕುವ ಮನಸ್ಥಿತಿಯು ಎಷ್ಟೊಂದು ಕ್ರೌರ್ಯವನ್ನು ಮೆರೆಯುತ್ತಿದೆಯೆಂದರೆ ಅಂತರ್ಜಾತಿ ಮದುವೆಯಾದ ಮಕ್ಕಳನ್ನು ತಮ್ಮ ಪಾಲಕರೆ ಕಾನೂನಿನ ಭಯವಿಲ್ಲದೇ, ಮರ್ಯಾದೆಯ ಹೆಸರಿನಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಮರ್ಯಾದ ಹತ್ಯೆ ಎಂಬ ಹೆಸರಿನಿಂದಲೂ ಸಮಾಜ ಕರೆಯುತ್ತದೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ, ಮೌಲ್ಯ ಎಂಬಂತೆ ಪ್ರತಿಷ್ಪಾಪಿಸುವ ಅಪಾಯವೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಮನುಷ್ಯ ಕುಲಕ್ಕೆ ಮಾರಕವಾದ ಮರ್ಯಾದ ಹತ್ಯೆಯಂತಹ ಪಿಡುಗನ್ನು ಬೇರು ಸಮೇತ ಕಿತ್ತು ಹಾಕುವ ಇಚ್ಚಾಶಕ್ತಿ, ಬದ್ಧತೆಯನ್ನು ಸರ್ಕಾರ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅಂತಹವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು ಘೋರ ಅಪರಾಧವೆಂದು ಪರಿಗಣಿಸಬೇಕು. ಸರ್ಕಾರ ಇಂತಹ ಘೋರ ಅಪರಾಧಗಳನ್ನು ನಿಗ್ರಹಿಸಲು ಉಗ್ರ ಕಾನೂನನ್ನು ರೂಪಿಸಿ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಮೊನ್ನೆಯಷ್ಟೇ ನಡೆದ ಮರ್ಯಾದಾ ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ಬಲಿಯಾದ ಮಾನ್ಯಳ ಹೆಸರಿನಲ್ಲಿ ಉಗ್ರ ಶಿಕ್ಷೆಯ ಕಾನೂನನ್ನು ರೂಪಿಸಬೇಕು. ಈ ಉಗ್ರ ಶಿಕ್ಷೆಯ ಕಾಯ್ದೆಗೆ ಮಾನ್ಯ ಹೆಸರಿಡಬೇಕು. ಇದುವರೆಗೂ ರಾಜ್ಯದಲ್ಲಿ ಮರ್ಯಾದ ಹತ್ಯೆಗೆ ಬಲಿಯಾದ ಜೀವಗಳನ್ನು ಇಂತಹದ್ದೊಂದು ಮಾನ್ಯ ಕಾಯ್ದೆಯು ಪ್ರತಿನಿಧಿಸುವಂತಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಆವರಗೆರೆ ರುದ್ರಮುನಿ, ದಾವಣಗೆರೆ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಪಕ್ಕೀರೇಶ ಹಳ್ಳಳ್ಳಿ, ಡಾ.ಎಂ.ಮಂಜಣ್ಣ, ಶಿವಕುಮಾರ ಮಾಡಾಳ, ರುದ್ರೇಗೌಡ ಇತರರು ಇದ್ದರು.