ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳು ಪಠ್ಯದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳು ಪಠ್ಯದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಕಲಾಪ್ರಕಾರಗಳಲ್ಲಿ ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಗಳ ಸ್ಪರ್ಧೆಯ ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬಾಲ್ಯದಲ್ಲಿಯೇ ಮಕ್ಕಳಿಗೆ ಅವರ ಆಸಕ್ತಿಯ ವಿವಿಧ ಕಲೆಗಳನ್ನು ರೂಢಿಸಿಕೊಳ್ಳಲು ಪಾಲಕರು ಪ್ರೋತ್ಸಾಹಿಸಬೇಕು. ಕಲೆಗಳು ಸೃಜನಶೀಲತೆ, ಕೌಶಲ್ಯ, ಮಾನಸಿಕ ಸ್ಥೈರ್ಯ ಹಾಗೂ ಸೌಂದರ್ಯ ವ್ಯಕ್ತಪಡಿಸುತ್ತವೆ. ಇವು ಮನರಂಜನೆಯೊಂದಿಗೆ ಜೀವನಶೈಲಿ ಪ್ರತಿಬಿಂಬಿಸುತ್ತವೆ. ಮನುಷ್ಯನ ಭಾವನೆ, ಸಂಸ್ಕೃತಿ ಹಾಗೂ ಪರಂಪರೆಯ ಅಭಿವ್ಯಕ್ತಿಯಾಗಿವೆ. ಸಂಗೀತ, ನೃತ್ಯ ಮುಂತಾದ ಕಲೆಗಳು ಮನಸ್ಸಿಗೆ ನೆಮ್ಮದಿ ಹಾಗೂ ಆತ್ಮ ಸಂತೃಪ್ತಿ ನೀಡುತ್ತವೆ ಎಂದು ಹೇಳಿದರು.

ವಿವಿಧ ಕಲಾ ಪ್ರಕಾರಗಳಲ್ಲಿ ಬಾಲ, ಕಿಶೋರ ಮತ್ತು ಯುವ ಪ್ರತಿಭೆಗಳ ಸ್ಪರ್ಧೆಗಳನ್ನು ಜಿಲ್ಲಾ ಮಟ್ಟದಲ್ಲಿ ಸರ್ಕಾರ ಏರ್ಪಡಿಸುವ ಮೂಲಕ ತಮ್ಮ ಕಲಾ ಪ್ರತಿಭೆ ಗುರುತಿಸಲು ಅವಕಾಶ ಒದಗಿಸಿದೆ. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆ ಪ್ರಸ್ತುತಪಡಿಸಬೇಕು. ಕಲೆ ಮನುಷ್ಯನ ನೆಮ್ಮದಿ ಜೀವನಕ್ಕೆ ಪೂರಕವಾಗಿ ಸಹಕಾರಿಯಾಗಿದೆ. ನೃತ್ಯ, ಸಂಗೀತ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಪ್ರಾವೀಣ್ಯತೆ ಹೊಂದಿ ಜಿಲ್ಲೆಯ ಕೀರ್ತಿ ತರಬೇಕು. ಜನಪದ ಹಾಡುಗಳು ಜನರ ಜೀವನಾಡಿಯಾಗಿವೆ. ಅವು ಮನೆ-ಮನಗಳಲ್ಲಿ ಹಾಸುಹೊಕ್ಕಾಗಿವೆ. ಜನಪದ ಸಾಹಿತ್ಯವು ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದು, ತಮ್ಮ ಕೆಲಸ ಕಾರ್ಯಗಳೊಂದಿಗೆ ಹಾಡಿನ ಮೂಲಕ ತಮ್ಮ ದಣಿವನ್ನು ತಣಿಸಿಕೊಳ್ಳುವ ಜನಪದರು ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ. ಹಲಸಂಗಿ ಗೆಳೆಯರು ಜನಪದ ಸಾಹಿತ್ಯ ಸಮೃದ್ಧಗೊಳಿಸಿ, ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತರೂ ಆದ ಹಿರಿಯ ಕಲಾವಿದರಾದ ಪಿ.ಎಸ್.ಕಡೇಮನಿ ಮಾತನಾಡಿ, ನಮ್ಮ ನಾಡಿನ ಕಲೆ, ಸಂಸ್ಕೃತಿ ಅರಿಯಬೇಕು. ಮಗುವಿನಲ್ಲಿಡಗಿರುವ ಸೂಪ್ತ ಪ್ರತಿಭೆ ಗುರುತಿಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ, ಹಿರಿಯ ರಂಗಭೂಮಿ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತರಾದ ಎಲ್.ಬಿ.ಶೇಖ್, ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯರಾದ ಶ್ರೀಮತಿ ರಾಜೇಶ್ವರಿ ಮೋಪಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿ ಅಮರೇಶ ದೊಡಮನಿ ಸೇರಿದಂತೆ ಹಿರಿಯ ಕಲಾವಿದರು, ತೀರ್ಪುಗಾರರು, ಸ್ಪರ್ಧಿಗಳು ಹಾಗೂ ಸಾರ್ವಜನಿಕರು ಇದ್ದರು.

ಗೀತವು ಮನಸ್ಸಿಗೆ ಮುದ ನೀಡುತ್ತದೆ. ಕೇಳುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಶಕ್ತಿ ಸಂಗೀತಕ್ಕಿದೆ. ವಿವಿಧ ಕಲೆಗಳನ್ನು ಕರಗತ ಮಾಡಿಕೊಂಡು ಸಾಧನೆ ಮಾಡಬೇಕು. ಮಕ್ಕಳು ಪಠ್ಯದೊಂದಿಗೆ ಸೃಜನಾತ್ಮಕ ಕಲೆಗಳನ್ನು ರೂಢಿಸಿಕೊಳ್ಳಬೇಕು. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲಾ ಪ್ರತಿಭೋತ್ಸವ ದಂತಹ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗೆ ಪೂರಕವಾಗಿ ಪ್ರೇರಣೆಯಾಗಿವೆ.

ಸೋಮಲಿಂಗ ಗೆಣ್ಣೂರ, ಅಪರ ಜಿಲ್ಲಾಧಿಕಾರಿ