ಕುಷ್ಟಗಿ: ನಾಡಿನ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಲು ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ ಹೇಳಿದರು.
ತಾಲೂಕಿನ ಮುದೇನೂರು ಗ್ರಾಮದಲ್ಲಿ ವೃತ್ತಿ ರಂಗಭೂಮಿ ಕಲಾವಿದರಿಗೆ ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಳಗದಿಂದ ಸನ್ಮಾನಿಸಿ ಮಾತನಾಡಿದರು.ರಂಗಭೂಮಿಗೆ ತನ್ನದೇಯಾದ ಇತಿಹಾಸ ಪರಂಪರೆಯಿದ್ದು, ಜೀವಂತ ಕಲೆಯಾದ ರಂಗಭೂಮಿಗೆ ಸಮಾಜದಲ್ಲಿ ತನ್ನದೆಯಾದ ಗೌರವವಿದೆ ಇಂದು ನಗರ ಪಟ್ಟಣ ಪ್ರದೇಶಗಳಲ್ಲಿ ನಾಟಕಗಳು ಮಾಯವಾಗುತ್ತಿದ್ದು ಪ್ರೋತ್ಸಾಹ ಕಡಿಮೆಯಾಗುತ್ತಿದೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ರಂಗಭೂಮಿ ಕಲೆ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಂಗಭೂಮಿ ಕಲಾವಿದೆ ಪ್ರೇಮಾ ಗುಳೇದಗುಡ್ಡ, ಕನ್ನಡ ನಾಡಿಗೆ ರಂಗಭೂಮಿ ಕಲೆಯು ದೊಡ್ಡ ಕೊಡುಗೆ ನೀಡುವ ಮೂಲಕ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ. ಇಂದಿನ ಆಧುನಿಕ ದಿನಗಳಲ್ಲಿ ವೃತ್ತಿ ರಂಗಭೂಮಿಯ ಕಲಾವಿದರ ಬದುಕು ದುಸ್ತರವಾಗಿದ್ದು ಗ್ರಾಮೀಣ ಭಾಗದಲ್ಲಿ ಪ್ರೋತ್ಸಾಹ ಸಿಗುತ್ತಿರುವ ಪರಿಣಾಮ ವೃತ್ತಿ ರಂಗಭೂಮಿ ಕಲೆ ಇನ್ನೂ ಜೀವಂತವಾಗಿದ್ದು, ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದ್ದು ಸರ್ಕಾರ ವೃತ್ತಿ ರಂಗಭೂಮಿ ಕಲಾವಿದರ ಬದುಕಿಗೆ ಬೆಳಕಾಗುವ ಯೋಜನೆ ಜಾರಿಗೆ ತರಬೇಕಿದೆ ಎಂದರು.ಈ ಸಂದರ್ಭದಲ್ಲಿ ಕಲಾವಿದ ಬಸವರಾಜ ಪಂಚಗಲ್, ಕಸಾಪ ಮಾಜಿ ಅಧ್ಯಕ್ಷ ಹನುಮೇಶ ಗುಮಗೇರಿ, ರವೀಂದ್ರ ಬಾಕಳೆ, ನಬಿಸಾಬ್ ಲಾಠಿ, ಶ್ರೀನಿವಾಸ ಕಂಟ್ಲಿ, ಪರಶಿವಮೂರ್ತಿ ದೋಟಿಹಾಳ, ರವೀಂದ್ರ ಬಳಿಗಾರ, ಬಸವರಾಜ ದೇವರಮನಿ, ಬುಡ್ನೇಸಾಬ ಕಲಾದಗಿ ಸೇರಿದಂತೆ ಅನೇಕರು ಇದ್ದರು.