ರೈತರ ಅಭ್ಯುದಯಕ್ಕಾಗಿ ಸರ್ಕಾರದಿಂದ ಉತ್ತೇಜನ

| Published : Mar 02 2025, 01:17 AM IST

ಸಾರಾಂಶ

ಚಳ್ಳಕೆರೆ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಗಾರವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಸಾವಯವ ಕೃಷಿ ಕುರಿತ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಶಾಸಕ ಟಿ.ರಘುಮೂರ್ತಿ ಹೇಳಿಕೆಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಜ್ಯ ಸರ್ಕಾರ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ರೂಪಿಸಿ ರೈತರ ಅಭ್ಯುದಯಕ್ಕಾಗಿ ಉತ್ತೇಜನ ನೀಡುತ್ತಾ ಬಂದಿದೆ. ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿ ಹೆಚ್ಚು ಆರ್ಥಿಕ ಲಾಭಪಡೆಯಲು ರೈತರಿಗೆ ಅನುಕೂಲ ಮಾಡಿಕೊಟ್ಟಂತೆ ತೋಟಗಾರಿಕೆ ಇಲಾಖೆಯಲ್ಲೂ ಸಹ ವಿವಿಧ ತೋಗಾರಿಕೆ ಬೆಳೆಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಶುಕ್ರವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳು ಹಾಗೂ ಸಾವಯವ ಕೃಷಿಯ ಬಗ್ಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತ ಸಮುದಾಯ ತಮಗೆ ಲಭ್ಯವಿರುವ ಜಮೀನಿನಲ್ಲಿ ಒಂದೇ ಹಂತದ ವಿವಿಧ ಬೆಳೆ ಬೆಳೆಯಲು ಎಲ್ಲಾ ರೀತಿಯ ಸಹಕಾರವಿದ್ದಲ್ಲಿ ತೋಟಗಾರಿಕೆ ಬೆಳೆ ಬೆಳೆದು ಲಾಭದತ್ತ ಮುನ್ನಡೆಯುವಂತೆ ಮನವಿ ಮಾಡಿದರು.

ತೋಟಗಾರಿಕೆ ಬೆಳೆಗಳಾದ ಅಡಕೆ, ದಾಳಿಂಬೆ, ತೆಂಗು, ಬಾಳೆ, ಪಪ್ಪಾಯಿ, ಮಾವು ಮುಂತಾದ ಬೆಳೆಗಳು ರೈತರಿಗೆ ಹೆಚ್ಚು ಆರ್ಥಿಕ ಶಕ್ತಿ ತುಂಬುವವು ಎಂದು ಹೇಳಿದರು.

ಸಾವಯವ ಕೃಷಿ ತಜ್ಞ ಯೋಗೇಶ್‌ ಅಪ್ಪಾಜಯ್ಯ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸಾವಯನ ಕೃಷಿಯೂ ವರದಾನವಾಗಿದೆ ಎಂಬುವುದನ್ನು ಅನೇಕ ರೈತರು ಈಗಾಗಲೇ ನಿರೂಫಿಸಿದ್ಧಾರೆ. ಈ ಹಿಂದೆ ರೈತ ಸಾವಯವ ಕೃಷಿ ಕ್ಷೇತ್ರದಿಂದ ದೂರವಿದ್ದು, ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಸಾವಯವ ಕೃಷಿಯ ಪ್ರತಿಬೆಳೆಯೂ ಹೆಚ್ಚು ಲಾಭವನ್ನು ತಂದುಕೊಡುತ್ತವೆ. ಆದರೆ, ರೈತರು ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಸೌಲಭ್ಯ ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನಿ ಡಾ.ಓಂಕಾರಪ್ಪ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ನಾನಾಕಾರಣಗಳಿಂದ ನಿಶಕ್ತನಾಗತ್ತಾನೆ. ಯಾವುದೇ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ರೈತರು ತಮ್ಮ ಬೆಳೆಗಳನ್ನು ಸೂಕ್ತ ರೀತಿಯಲ್ಲಿ ಬೆಳೆಯಲು ವಿಫಲವಾದಾಗ ಮಾರುಕಟ್ಟೆ ಸಮಸ್ಯೆ ಉಂಟಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ಯಾವ ರೀತಿಯ ಗೌರವ ಕೊಡುತ್ತಾನೋ ಅದೇ ರೀತಿ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.

ರೈತ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಕೆ.ಪಿ.ಭೂತಯ್ಯ, ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ, ತಿಪ್ಪೇಸ್ವಾಮಿ, ಕರಿಯಪ್ಪ ಮಾತನಾಡಿದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಕೆಪಿಸಿ ಸದಸ್ಯರಾದ ನೇತ್ರಾವತಿ, ಅಂಗಡಿ ರಮೇಶ್, ರೈತ ಮುಖಂಡರಾದ ಶ್ರೀಕಂಠ ಮೂರ್ತಿ, ಹೆಗ್ಗೆರೆ ಆನಂದಪ್ಪ, ಆರ್.ಮಲ್ಲೇಶಪ್ಪ, ಕೃಷಿ ಸಹಾಯಕ ನಿರ್ದೇಶಕ ಜೆ.ಅಶೋಕ್, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ರೇಷ್ಮೆ ಅಧಿಕಾರಿ, ಉಮಾಪತಿ, ಪಶು ಅಧಿಕಾರಿ ಡಾ.ರೇವಣ್ಣ ಮುಂತಾದವರು ಪಾಲ್ಗೊಂಡಿದ್ದರು.