ಪ್ರೋತ್ಸಾಹವೇ ಜಾನಪದ ಗೀತೆ ಗಾಯನಕ್ಕೆ ಸ್ಫೂರ್ತಿ

| Published : Oct 31 2024, 01:00 AM IST

ಸಾರಾಂಶ

ತರೀಕೆರೆ, ನಾಡಿನ ಸುಪ್ರಸಿದ್ಧ ಜನಪದ ಗಾಯಕರು ಹಾಗೂ ಜನಪದ ಸಾಹಿತ್ಯ ರತ್ನ ಕೆ.ಆರ್.ಲಿಂಗಪ್ಪ ಮತ್ತು ತಮ್ಮ ಯಜಮಾನ ರಾದ ಸುಬ್ರಣ್ಣಾರ ರಾಮಚಂದ್ರಪ್ಪ ಅವರ ಪ್ರೋತ್ಸಾಹವೇ ತಮ್ಮ ಜನಪದ ಗೀತೆ ಗಾಯನ ಮತ್ತು ವಿಶ್ಲೇಷಣೆಗೆ ಪ್ರೇರಣೆ ನೀಡಿದೆ ಎಂದು ಹಿರಿಯ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ಹೇಳಿದ್ದಾರೆ.

- ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಹಿನ್ನೆಲೆ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ಸಂತಸ

ಕನ್ನಡಪ್ರಭ ವಾರ್ತೆ, ತರೀಕೆರೆ

ನಾಡಿನ ಸುಪ್ರಸಿದ್ಧ ಜನಪದ ಗಾಯಕರು ಹಾಗೂ ಜನಪದ ಸಾಹಿತ್ಯ ರತ್ನ ಕೆ.ಆರ್.ಲಿಂಗಪ್ಪ ಮತ್ತು ತಮ್ಮ ಯಜಮಾನ ರಾದ ಸುಬ್ರಣ್ಣಾರ ರಾಮಚಂದ್ರಪ್ಪ ಅವರ ಪ್ರೋತ್ಸಾಹವೇ ತಮ್ಮ ಜನಪದ ಗೀತೆ ಗಾಯನ ಮತ್ತು ವಿಶ್ಲೇಷಣೆಗೆ ಪ್ರೇರಣೆ ನೀಡಿದೆ ಎಂದು ಹಿರಿಯ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ಹೇಳಿದ್ದಾರೆ.

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಹಿನ್ನೆಲೆಯಲ್ಲಿ ಕನ್ನಡ ಪ್ರಭ ಪತ್ರಿಕೆಯೊಡನೆ ತಮ್ಮ ಸಂತೋಷ ಹಂಚಿಕೊಂಡ ಹಿರಿಯ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ನನ್ನನ್ನು ಗುರುತಿಸಿರುವುದು ನನಗೆ ಅತೀವ ಆನಂದ ತಂದಿದೆ. ನಾಡಿನ ಜನತೆ ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಇಂದು ನಾನು ಈ ಪ್ರಶಸ್ತಿಗೆ ಭಾಜನಳಾಗಿದ್ದೇನೆ ಎಂದರು.

ಜಾನಪದ ಸಂಸ್ಕೃತಿಯಾಗಿದೆಃ

ಚಿಕ್ಕಂದಿನಿಂದಲೇ ತಾಯಿ ಲಕ್ಕಮ್ಮ ಅವರ ಜೊತೆಗೂಡಿ ಜನಪದ ಗೀತೆಗಳನ್ನು ಕಲಿತ ನನಗೆ ಜನಪದ ಗೀತೆಗಳನ್ನು ಹೇಳುವುದು ನಮ್ಮ ಸಂಸ್ಕೃತಿಯಾಗಿ ಬೆಳೆದು ಬಂದಿದೆ. ನಮ್ಮ ತಂದೆ ಗೋವಿಂದಪ್ಪ ಮತ್ತು ಅಣ್ಣ ಸಿದ್ದರಾಮಪ್ಪ ಸುಶ್ರಾವ್ಯವಾಗಿ ಗೀತೆ ಗಾಯನ ಮಾಡುತ್ತಿದ್ದರು. ನನ್ನ ಮತ್ತೊಬ್ಬ ಅಣ್ಣ ರಾಮದಾಸಪ್ಪ ಕೀರ್ತನೆ, ಭಜನೆಗಳನ್ನು ನಮ್ಮ ಮನೆಯಲ್ಲಿ ಪ್ರತಿನಿತ್ಯ ಹೇಳಿಕೊಳ್ಳುತ್ತಿದ್ದರು. ಇಂತಹ ಪರಿಸರದಲ್ಲಿ ನಾನು ಬೆಳೆದದ್ದು ನನ್ನ ಕಲೆಗೆ ಸ್ಪೂರ್ತಿಯಾಯಿತು ಎಂದು ಹೇಳಿದರು.

ಸೊಲ್ಲಾಪುರ ನಮ್ಮ ತಾಯಿ ಮನೆಯಾಗಿದ್ದು ಅಲ್ಲಿಯೇ ತಾವು ಏಳನೆ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆ. ನಂತರ ಮುಗುಳಿ ಗ್ರಾಮಕ್ಕೆ ಬಂದ ಮೇಲೆ ನನ್ನ ಗೀತ ಗಾಯನ ಕೇಳಿದ ಜನಪದ ಸಾಹಿತ್ಯ ರತ್ನ ಕೆ.ಆರ್.ಲಿಂಗಪ್ಪ ಅವರು ನೀವು ಶುಶ್ರಾವ್ಯವಾಗಿ ಜನಪದ ಗೀತೆಗಳನ್ನು ಹಾಡುತ್ತೀರಿ ಎಂದು ಮೆಚ್ಚಗೆ ವ್ಯಕ್ತಪಡಿಸಿದ್ದಲ್ಲದೆ, ಸೋಬಾನೆ ಸೊಬಗು ಗೀತೆಗಳನ್ನು ಸಿದ್ಧಪಡಿಸಿ ಭದ್ರಾವತಿ ಆಕಾಶವಾಣಿಯಲ್ಲಿ ನನಗೆ ಒಂದು ಗಂಟೆಗಳ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಿದರು. ಜನಪದ ಒಗಟುಗಳನ್ನು ನನಗೆ ಹೇಳಿಕೊಟ್ಟರು. ಅದೇ ರೀತಿ ಹಿರಿಯ ಜನಪದ ತಜ್ಞರಾದ ಬಸವರಾಜ ನೆಲ್ಲಿಸರ ಜನಪದ ಗೀತೆಗಳ ಹೇಳುವ ಧಾಟಿ ತಿಳಿಸಿಕೊಟ್ಟರು,

ಹಿರಿಯ ಸಾಹಿತಿ ತರೀಕೆರೆ ಎಚ್.ಸಿ.ಚಂದ್ರಪ್ಪ ಅನೇಕ ವೇದಿಕೆ ಕಾರ್ಯಕ್ರಮಗಳನ್ನು ಕಲ್ಪಿಸಿಕೊಟ್ಟರು. ಜನಪದದಲ್ಲಿ ಮಹಿಳೆ, ಕೃಷಿಯಲ್ಲಿ ಮಹಿಳೆ ಪಾತ್ರ ಮತ್ತು ಚಿಕ್ಕ ಕುಟುಂಬ ಕುರಿತು ಸಿದ್ಧಪಡಿಸಿದ ಮೂರು ರೂಪಕಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ ಎಂದು ನುಡಿದರು.

ತರೀಕೆರೆ ತಾಲೂಕಿನಲ್ಲಿ 14ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ನನ್ನನ್ನು ಆಯ್ಕೆಮಾಡಿರುವುದು ನನಗೆ ಆಪಾರ ಸಂತೋಷ ತಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ ಅವರು ಜಿಲ್ಲಾ ಜಾನಪದ ಮಹಿಳಾ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು ಮತ್ತು ಎಲ್ಲಾ ಮಹಿಳಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಪ್ರೋತ್ಸಾಹಿಸಿದ್ದಾರೆ. ನನ್ನ ಜೀವನದ ಜೊತೆಗೇ ಜನಪದವನ್ನು ಬೆಳೆಸಿಕೊಂಡು ಬಂದಿದ್ದೇನೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ನನ್ನನ್ನು ಗುರುತಿಸಿರುವುದು ಅತೀವ ಸಂತಸ ತಂದಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಈ ಸಂದರ್ಭದಲ್ಲಿ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮರನ್ನು ಶಾಸಕ ಜಿ.ಎಚ್. ಶ್ರೀನಿವಾಸ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಲೇಖಕ ತ.ಮ.ದೇವಾನಂದ್, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಜಿಲ್ಲಾ ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಸವಿತಾ ಸತ್ಯನಾರಾಯಣ್, ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್.ವಿಶಾಲಾಕ್ಷ್ಮಮ್ಮ ಕನ್ನಡಶ್ರೀ ಬಿ.ಎಸ್.ಭಗವಾನ್, ಪುರಸಭಾ ಸದಸ್ಯರು ಮತ್ತು ಸಾಹಿತಿ ಟಿ.ದಾದಾಪೀರ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್, ಸಯದ್ ಮುಹೀಬುಲ್ಲ, ಕಸಾಪ ನಿಕಟಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ, ಕಸಾಪ ಹಿರಿಯ ಸದಸ್ಯ ಶಿವಣ್ಣ, ಅಜ್ಜಂಪುರ ಎ.ಸಿ.ಚಂದ್ರಪ್ಪ, ಎಚ್.ಆರ್.ಚಂದ್ರಪ್ಪ, ಅಜ್ಜಂಪುರ ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಗಾಯಿತ್ರಮ್ಮ, ರಂಜಿತ, ಪುಷ್ಪ ಅಭಿನಂದಿಸಿದ್ದಾರೆ.

----------------ಫೋಟೋ ಇದೆಃ30ಕೆಟಿಆರ್.ಕೆ.4ಃ ಹಿರಿಯ ಜಾನಪದ ಕಲಾವಿದರಾದ ಮುಗುಳಿ ಲಕ್ಷ್ಮೀದೇವಮ್ಮ