ಕನ್ನಡಪ್ರಭ ವಾರ್ತೆ ವಿಜಯಪುರ

ಗ್ರಾಮೀಣ ಪ್ರದೇಶದ ಹಿರಿಯ ಮಹಿಳೆಯರು ಜಾನಪದ ಸಾಹಿತ್ಯ ರೂವಾರಿಗಳಾಗಿದ್ದಾರೆ. ಗ್ರಾಮೀಣ ಮಹಿಳೆಯರ ಪ್ರತಿಭೆ ಪ್ರೋತ್ಸಾಹಿಸಲು, ಅವಕಾಶ ನೀಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ನಿರ್ವಹಿಸುತ್ತದೆ ಎಂದು ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಎಲ್ಲ ತಾಲೂಕಿನ ಕಸಾಪ ಮಹಿಳಾ ಪ್ರತಿನಿಧಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ಶೋಭಾನ ಪದ, ಗೀಗಿ ಪದ, ಜೋಗುಳ ಪದ, ತೊಟ್ಟಿಲು ಪದಗಳು, ಸುರಗಿ ಪದಗಳು, ಐರಾಣಿ ಪದಗಳು, ಗುಳ್ಳವ್ವನ ಪದಗಳು, ಬಯಕೆ ಪದಗಳು, ಸೀಮಂತ ಪದಗಳು, ಬೀಸುವ ಪದಗಳು, ಕುಟ್ಟುವ ಪದಗಳು, ಹೆಸರಿಡುವ ಪದಗಳು, ತೀರಿಕೊಂಡಾಗಿನ ಪದಗಳು, ಉಡಿ ತುಂಬುವ ಪದಗಳು, ಅರಿಶಿಣ ಹಚ್ಚುವ ಪದಗಳು ಮುಂತಾದ ಹಾಡುವ ಹಿರಿಯ ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ದೊರಕುವುದರಿಂದ ಅವರನ್ನು ಗುರುತಿಸಿ ವೇದಿಕೆ ನೀಡುತ್ತೇವೆ ಎಂದರು.

ಗ್ರಾಮೀಣರ ಸಾಹಿತ್ಯ ನಮ್ಮೆಲ್ಲರ ಸಂಸ್ಕೃತಿಯ ಪ್ರತೀಕವಾಗಿದೆ. ತಾವು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕೈಜೋಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಕಸಾಪ ಈಗಾಗಲೇ ಜನಸಾಮಾನ್ಯರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ ಪರಿಣಾಮಕಾರಿಯಾಗಿ ಎಲ್ಲರಿಗೂ ಅವಕಾಶ ನೀಡುವುದರ ಕಡೆಗೆ ಗಮನ ಹರಿಸೋಣ ಎಂದರು.

ಶಿವಣಗಿ ಪ್ರಾಥಮಿಕ ಶಾಲೆ ಉರ್ದು ಸಂಪನ್ಮೂಲ ವ್ಯಕ್ತಿ ಮೊಹದ್ದೀನ ರೂಗಿ, ಜಿಲ್ಲಾ ಮಹಿಳಾ ಪದಾಧಿಕಾರಿಗಳಾದ ನೀಲಮ್ಮ ಹೆಡ್ರಾಮಿ, ನಂದಾ ಗುನ್ನಾಪೂರ, ಶ್ರೀದೇವಿ ಕುಲಕರ್ಣಿ, ದಿಶಾ ಚಿಕನಾದ, ಅನಸೂಯಾ ಮದ್ರಿ, ಸರಸ್ವತಿ ಮಾಸ್ಯಾಳ, ಜಯಶ್ರೀ ನಾಟೀಕಾರ, ವಿದ್ಯಾ ತೆನಹಳ್ಳಿ, ಪ್ರಿಯಾಂಕಾ ಭೀಸೆ, ಶೋಭಾ ಬಿರಾದಾರ, ಶೋಭಾ ಹಂಚನಾಳ, ಲಕ್ಕಮ್ಮ ಬಿರಾದಾರ, ಜಯಶ್ರೀ ಯಾಳವಾರ, ಶ್ರೀದೇವಿ ಅಳಗುಂಡಗಿ, ಚಂದ್ರಕಲಾ ಸುಣಗಾರ, ಸಗೂಮಾ ತಾಂಬೂಳೆ, ಪೂಜಾ ದೆವಣಗಾಂವ ಇದ್ದರು.