ನೂರಾರು ಎಕರೆ ಅರಣ್ಯ ಒತ್ತುವರಿ: ಉನ್ನತ ತನಿಖೆಗೆ ಆಗ್ರಹ

| Published : Aug 20 2024, 12:46 AM IST

ಸಾರಾಂಶ

ಕಳೆದೊಂದು ವರ್ಷದಿಂದ ಸುಮಾರು 250 ರಿಂದ 300 ಎಕರೆಯಷ್ಟು ಅರಣ್ಯ ಪ್ರದೇಶ ಒತ್ತುವರಿ ಮಾಡಿ ಅಡಕೆ ತೋಟ ನಿರ್ಮಿಸಲಾಗಿದೆ. ಅಲ್ಲದೆ ಅರಣ್ಯ ಗುಡ್ಡಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ

ಕನ್ನಡಪ್ರಭ ವಾರ್ತೆ ಭದ್ರಾವತಿ

ಚನ್ನಗಿರಿ-ಭದ್ರಾವತಿ ತಾಲೂಕುಗಳ ಶಾಂತಿಸಾಗರ-ಮಾವಿನಕಟ್ಟೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ಸುಮಾರು 250 ರಿಂದ 300 ಎಕರೆಯಷ್ಟು ಅರಣ್ಯ ಪ್ರದೇಶ ಒತ್ತುವರಿ ಮಾಡಿ ಅಡಕೆ ತೋಟ ನಿರ್ಮಿಸಲಾಗಿದೆ. ಅಲ್ಲದೆ ಅರಣ್ಯ ಗುಡ್ಡಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ಸ್ಥಳೀಯರು ಹಲವಾರು ಬಾರಿ ದೂರು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಕ್ರಮದಲ್ಲಿ ಇಲಾಖೆ ಅಧಿಕಾರಿಗಳು ಸಹ ಭಾಗಿರುವುದು ಕಂಡು ಬರುತ್ತಿದ್ದು, ಈ ಹಿನ್ನೆಲೆ ಅರಣ್ಯ ಸಚಿವರು ಈ ಅಕ್ರಮವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ನ್ಯಾಯವಾದಿ, ನೈರುತ್ಯ ಪದವೀಧರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜಿ.ಆರ್ ಷಡಾಕ್ಷರಪ್ಪ ಆರೋಪಿಸಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯರು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಸಹಾಯವಾಣಿ ಹಾಗೂ ದೂರುಸಂಖ್ಯೆ 1926ಗೆ ಕರೆ ಮಾಡಿ ದೂರು ನೀಡಿದ್ದಾರೆ. ಇತ್ತೀಚೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರು ಜಿಲ್ಲೆಗೆ ಭೇಟಿ ನೀಡಿದಾಗ ಅವರಿಗೂ ಸಹ ದೂರು ನೀಡಿದ್ದಾರೆ. ಅರಣ್ಯ ಸಚಿವರು ದೂರು ಸ್ವೀಕರಿಸಿ ತನಿಖೆಗೆ ಸೂಚಿಸಿದಾಗ ಇಲಾಖೆಯಲ್ಲಿ ಅರಣ್ಯ ಒತ್ತುವರಿಗೆ ಸಹಕಾರ ನೀಡಿದವರಿಂದಲೇ ತನಿಖೆ ನಡೆಸಿದ್ದು, ಕೇವಲ ಒಬ್ಬ ಗಾರ್ಡ್‌ನನ್ನು ಮಾತ್ರ ಅಮಾನತ್ತುಗೊಳಿಸಿದ್ದು, ಇದು ಅಧಿಕಾರಿಗಳು ಈ ಪ್ರಕರಣ ಮುಚ್ಚಿಹಾಕಲು ನಡೆಸಿರುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಸಚಿವರ ಸೂಚನೆ ಮೇರೆಗೆ ಕಾಟಾಚಾರದ ತನಿಖೆ ನಡೆಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿಯವರು ಕಚೇರಿ ಆದೇಶ ಸಂಖ್ಯೆ: 15/2024-25, ದಿನಾಂಕ: 29-07-2024ರಲ್ಲಿ ತಾಲೂಕಿನ ಗುಡುಮಘಟ್ಟ ಗ್ರಾಮದ ಸರ್ವೆ ನಂ.43ರಲ್ಲಿ ಕಳೆದ 4-5 ತಿಂಗಳಿನಿಂದ ಸುಮಾರು 15 ಎಕರೆಯಷ್ಟು ಅರಣ್ಯ ಪ್ರದೇಶ ಒತ್ತುವರಿ ಮಾಡಿ ಆ ಜಾಗದಲ್ಲಿ ಅಡಕೆ ತೋಟ ನಿರ್ಮಾಣ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಹಾಗೂ ಚನ್ನಗಿರಿ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶಾಂತಿಸಾಗರ ವಲಯ ಅರಣ್ಯಾಧಿಕಾರಿಯವರು ಅರಣ್ಯ ಭೂಮಿ ಒತ್ತುವರಿಯಾಗಿರುವ ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡುವಲ್ಲಿ ಕರ್ತವ್ಯ ನಿರ್ಲಕ್ಷ್ಯತೋರಿದ್ದಾರೆಂದು ನೀಡಿರುವ ವರದಿಯನ್ನಾಧರಿಸಿ ಗಸ್ತು ಅರಣ್ಯ ಪಾಲಕ (ಗಾರ್ಡ್) ಜೆ.ಎಲ್. ಜಯರಾಮ್ ಅವರನ್ನು ಅಮಾನತ್ತು ಪಡಿಸುವುದಾಗಿ ಆದೇಶ ಮಾಡಿರುತ್ತಾರೆ ಎಂದರು.

ಶಾಂತಿಸಾಗರ ವಲಯದಲ್ಲಿ ನಿರಂತರವಾಗಿ ಆರಣ್ಯ ಒತ್ತುವರಿಯಾಗುತ್ತಿರುವ ಬಗ್ಗೆ ಸ್ಥಳೀಯರಿಂದ ನಿರಂತರ ದೂರುಗಳು ಬರುತ್ತಿದ್ದರೂ ಆ ಬಗ್ಗೆ ಗಮನ ಹರಿಸಬೇಕಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ರತ್ನಪ್ರಭ, ವಲಯ ಅರಣ್ಯಾಧಿಕಾರಿ ಜಗದೀಶ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿಯವರು ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದಾರೆ. ಮೇಲ್ನೋಟಕ್ಕೆ ಸುಮಾರು 250 ರಿಂದ 300 ಎಕರೆಯಷ್ಟು ಅರಣ್ಯ ಪ್ರದೇಶ ನಾಶವಾಗಿರುವುದು ಗೊತ್ತಾಗುತ್ತದೆ. ಆದರೆ, ಆಶಿಶ್ ರೆಡ್ಡಿಯವರು ತಮ್ಮ ಆದೇಶದಲ್ಲಿ ಕೇವಲ 15 ಎಕರೆ ಮಾತ್ರ ಅರಣ್ಯ ನಾಶವಾಗಿದೆ ಎಂದು ಹೇಳಿರುವುದು ಈ ಪ್ರಕರಣದಲ್ಲಿ ಆರ್.ಎಫ್.ಓ ಜಗದೀಶ್ ಮತ್ತು ಎಸಿಎಫ್ ಆರ್.ರತ್ನಪ್ರಭ ಇವರನ್ನು ರಕ್ಷಣೆ ಮಾಡುವ ಹುನ್ನಾರ ಅಡಗಿದೆ ಎಂದು ದೂರಿದರು.

ಆಶಿಶ್ ರೆಡ್ಡಿಯವರು ಕಾಟಾಚಾರದ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಗಸ್ತು ಅರಣ್ಯ ಪಾಲಕರನ್ನು ಅಮಾನತ್ತು ಮಾಡಿದ್ದು ಬಿಟ್ಟರೆ, ಒತ್ತುವರಿದಾರರನ್ನು ತೆರವುಗೊಳಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಒತ್ತುವರಿದಾರರ ರಕ್ಷಣೆಗೂ ನಿಂತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿಸಾಗರ ವಲಯದಲ್ಲಿ ಅವ್ಯಾಹತವಾಗಿ ಅರಣ್ಯ ನಾಶವಾಗುತ್ತಿದ್ದರೂ ಆ ಬಗ್ಗೆ ಗಮನ ಹರಿಸಬೇಕಾದ ಈ ಮೂವರೂ ಅಧಿಕಾರಿಗಳು ಒತ್ತುವರಿದಾರರೊಂದಿಗೆ ಶಾಮೀಲಾಗಿರುವ ಶಂಕೆ ಇದೆ. ಈ ಹಿನ್ನೆಲೆ ಅರಣ್ಯ ಸಚಿವರು ಕೂಡಲೇ ಶಾಂತಿಸಾಗರ ವಲಯದ ಒತ್ತುವರಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕು. ಒತ್ತುವರಿ ತೆರವುಗೊಳಿಸಬೇಕು. ಕರ್ತವ್ಯಲೋಪ ಎಸಗಿರುವ ಈ ಮೂವರು ಅಧಿಕಾರಿಗಳನ್ನೂ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.