ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರಕ್ಕೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆ ಜಾಗ ಈಗ ಹಲವು ಸಂಕಷ್ಟಗಳಿಗೆ ಈಡಾಗಿದೆ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸುತ್ತಮುತ್ತ ಲೇಔಟ್ ಗಳು ಎದ್ದು ನಿಂತಿರುವುದರಿಂದ ಕಾಲೇಜಿನ ಎಡ ಭಾಗದಲ್ಲಿ ಹರಿದು ಕೆರೆಗೆ ಹೋಗುತ್ತಿದ್ದ ನೀರು ಸಂಪೂರ್ಣವಾಗಿ ಕಾಲೇಜು ಹಿಂಭಾಗದ ಪ್ರದೇಶದಲ್ಲೇ ನಿಂತು ಹೋಗಿದೆ. ಅಲ್ಲಿ ಸುಮಾರು ಒಂದೂವರೆ ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಹೇಳಲಾಗುತಿದ್ದು, ಇದರಿಂದ ಮುಸ್ಟೂರು ಕೆರೆ ಹಾಗೂ ಚಿಕ್ಕಬಳ್ಳಾಪುರ ನಗರದಿಂದ ಹರಿದು ಬರುವ ನೀರೆಲ್ಲಾ ಮುಂದಕ್ಕೆ ಸಾಗದೆ ಅಣಕನೂರು ರೈತರ ಕೃಷಿ ಜಮೀನುಗಳು ಮುಳುಗಿ ಹೋಗುವಂತಾಗಿದ್ದು, ಇಂದು ಆ ಸ್ಥಳಕ್ಕೆ ಬಂದು ಪರಿಶೀಲಿಸಿದ ಜಿಲ್ಲಾಧಿಕಾರಿ ಜಿ. ಪ್ರಭು ಸಮಸ್ಯೆಗೆ ಪರಿಹಾರ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮೂರು ಇಲಾಖೆಗಳಿಗೆ ಸೂಚಿಸಿದ್ದಾರೆ.ಈ ಕುರಿತು ಮೊನ್ನೆ ಸಂಸದ ಡಾ.ಕೆ.ಸುಧಾಕರ್ ರವರು ಭೇಟಿ ನೀಡಿ ಪರಿಶೀಲಿಸಿ, ಒತ್ತುವರಿ ತೆರವು ಗೊಳಿಸಿ, ರಾಜಕಾಲುವೆ ಇದ್ದರೆ ಅಗಲಗೊಳಿಸಿ ಎಂದು ಕಂದಾಯ ಇಲಾಖೆಗೆ ಸೂಚಿಸಿದ್ದರು. ಆ ನಂತರ ಅಣಕನೂರು ಕೆಲವು ರೈತಮುಖಂಡರು ಜಿಲ್ಲಾಧಿಕಾರಿಗೂ ದೂರು ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಜಿ.ಪ್ರಭುರವರು ತಹಸೀಲ್ದಾರ್ ರಶ್ಮಿ, ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ನಗರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದರು.ಪರಿಶೀಲನೆ ವೇಳೆ ರಾಜಕಾಲುವೆ ಸೇರಿ ಸುಮಾರು ಒಂದೂವರೆ ಎಕರೆ ಒತ್ತುವರಿಯಾಗಿದೆ ಎಂದು ತಿಳಿದು ಬಂದ ಹಿನ್ನೆಲೆ ಒಂದು ವಾರದಲ್ಲಿ ಒತ್ತುವರಿ ತೆರವುಗೊಳಿಸಿ ಕೆರೆ ಏರಿ ತಗ್ಗಿಸಿ ನೀರು ಮುಂದಕ್ಕೆ ಸಾಗುವಂತೆ ಮಾಡಿ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ನಗರಸಭೆಯವರು ರಸ್ತೆಯಿಂದ ಎಡಭಾಗಕ್ಕೆ ಮತ್ತೊಂದು ಎಸ್ ಟಿ ಪಿ ಪ್ಲಾಂಟ್ ನಿರ್ಮಿಸಿ ರೈತರಿಗೂ ತೊಂದರೆಯಾಗಬಾರದು, ಕಾಲೇಜು ಸುತ್ತಮುತ್ತ ನೀರು ನಿಲ್ಲಬಾರದು ಎಂದು ಸೂಚಿಸಿದರು.
ಇನ್ನು ಕಾಲೇಜು ಮುಂಭಾಗದಲ್ಲಿ ಹರಿದು ಹೋಗುತಿದ್ದ ರಾಜಕಾಲುವೆ ತುಂಬಾ ಹೂಳು ತುಂಬಿ ನೀರು ಮುಂದಕ್ಕೆ ಸಾಗದೆ ನಿಂತು ಹೋಗಿತ್ತು. ಅದನ್ನು ಅಣಕನೂರು ರೈತರ ಮನವಿ ಮೇರೆಗೆ ಸಮಾಜ ಸೇವಕ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ.ಬಿ.ರೆಡ್ಡಿ , ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಆರ್. ರಾಮಣ್ಣ ಮತ್ತು ಪಟ್ರೇನಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ರವರು ಸ್ವಂತ ಖರ್ಚಿನಲ್ಲಿ ಹಿಟಾಚಿ ಮತ್ತು ಜೆಸಿಬಿ ತರಿಸಿ ಹೂಳು ತಗೆದು ಸ್ವಚ್ಛಗೊಳಿಸಿಕೊಟ್ಟಿದ್ದಾರೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಅಣಕನೂರು ರೈತರಿಗೆ ಧನ್ಯವಾದ ಹೇಳಿದ ಜಿಲ್ಲಾಧಿಕಾರಿ ಜಿ.ಪ್ರಭು ಅವರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಆರ್. ರಾಮಣ್ಣ ಮತ್ತು ಪಟ್ರೇನಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ರವರಿಗೆ ಶಾಲು ಹಾಕಿ ಸನ್ಮಾನಿಸಿ ಧನ್ಯವಾದ ತಿಳಿಸಿದರು.
ಸಿಕೆಬಿ-3 ರಾಜಕಾಲುವೆ ಹೂಳು ತೆಗೆಯಲು ಸಹಾಯ ಮಾಡಿದ ಎ.ಆರ್. ರಾಮಣ್ಣ ಮತ್ತು ವೆಂಕಟೇಶ್ ರವರಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಶಾಲು ಹಾಕಿ ಸನ್ಮಾನಿಸಿದರು.