ಮೈಕ್ರೋ ಫೈನಾನ್ಸ್‌ಗಳಿಂದ ಮಹಿಳಾ ಶೋಷಣೆ ನಿಲ್ಲಲಿ

| Published : Feb 16 2025, 01:48 AM IST

ಸಾರಾಂಶ

ಮೈಕ್ರೋ ಫೈನಾನ್ಸ್ ಎಂಬುದು ಬಹು ದೊಡ್ಡ ದಂಧೆಯಾಗಿ ಬೆಳೆದಿದೆ. ಸಣ್ಣಪುಟ್ಟ ಸಾಲ ವಸೂಲಾತಿಗೂ ಕಿರುಕುಳ ನೀಡಿ, ಅಮೂಲ್ಯ ಪ್ರಾಣಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಆತಂಕದ ಪರಿಸ್ಥಿತಿ ಧನದಾಹಿ ಹಣಕಾಸು ಸಂಸ್ಥೆಗಳು ನಿರ್ಮಿಸುತ್ತಿವೆ ಎಂದು ಎಐಎಂಎಸ್‌ಎಸ್‌ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಆಕ್ರೋಶ ದಾವಣಗೆರೆಯಲ್ಲಿ ವ್ಯಕ್ತಪಡಿಸಿದ್ದಾರೆ.

- ಜಿಲ್ಲಾ ಮಹಿಳಾ ಸಮ್ಮೇಳನದಲ್ಲಿ ಎಐಎಂಎಸ್‌ಎಸ್‌ ಮುಖಂಡೆ ಎಸ್.ಶೋಭಾ ಒತ್ತಾಯ । ಹೆಣ್ಣುಮಕ್ಕಳು ಆತ್ಮವಿಶ್ವಾಸ ಹೊಂದಲು ಸಲಹೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮೈಕ್ರೋ ಫೈನಾನ್ಸ್ ಎಂಬುದು ಬಹು ದೊಡ್ಡ ದಂಧೆಯಾಗಿ ಬೆಳೆದಿದೆ. ಸಣ್ಣಪುಟ್ಟ ಸಾಲ ವಸೂಲಾತಿಗೂ ಕಿರುಕುಳ ನೀಡಿ, ಅಮೂಲ್ಯ ಪ್ರಾಣಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಆತಂಕದ ಪರಿಸ್ಥಿತಿ ಧನದಾಹಿ ಹಣಕಾಸು ಸಂಸ್ಥೆಗಳು ನಿರ್ಮಿಸುತ್ತಿವೆ ಎಂದು ಎಐಎಂಎಸ್‌ಎಸ್‌ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಆಕ್ರೋಶ ವ್ಯಕ್ತಪಡಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಸಮ್ಮೇಳನದಲ್ಲಿ ಅವರು ಮಾತನಾಡಿದರು. ನೂರಾರು ಕೋಟಿ ರು. ತೆರಿಗೆಗಳ್ಳರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಆದರೆ, ₹50-₹60 ಸಾವಿರ ಸಾಲ ತೀರಿಸಲಾಗದೇ ಹೆಣ್ಣುಮಕ್ಕಳು, ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ದೂರಿದರು.

ಕಾನೂನುಬದ್ಧವಾಗಿ 8 ಗಂಟೆ ದುಡಿಸಿಕೊಳ್ಳಬೇಕು. ಆದರೆ, ಐಟಿ ಕಂಪನಿಗಳಲ್ಲಿ ಅನಿಯಮಿತವಾಗಿ ಕೆಲಸದೊತ್ತದ ಹೇರುವ ಮೂಲಕ ಆಧುನಿಕ ಜೀತ ಪದ್ಧತಿ ಹೇರಲಾಗಿದೆ. ಇದೆಲ್ಲದರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮಹಿಳೆಯರು ಸಮಾನಮನಸ್ಕ ಪುರುಷರ ಜೊತೆಗೂಡಿ, ಹೊಸ ಚಿಂತನೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಹೆಣ್ಣಿನ ಬಗ್ಗೆ ಅನೇಕ ತಪ್ಪು ಅಭಿಪ್ರಾಯ ಬಿತ್ತಲಾಗಿದೆ. ಹೆಣ್ಣು ಅಬಲೆ, ಹೆಣ್ಣಿಗೆ ಹೆಣ್ಣೇ ಶತ್ರು ಎಂಬಿತ್ಯಾದಿ ತಪ್ಪು ಗ್ರಹಿಕೆಗಳನ್ನು ಹಿಂದಿನಿಂದಲೂ ಬಿತ್ತಲಾಗಿದೆ. ಇದರಿಂದಾಗಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹೆಣ್ಣು-ಗಂಡು ಇಬ್ಬರೂ ಸಮಾನರೆಂಬ ಮನೋಭಾವ ಸಮಾಜದಲ್ಲೂ ಮೂಡಬೇಕಾಗಿದೆ. ಪುರುಷರಿಗೆ ಸಮಾನವಾಗಿ ಮಹಿಳೆಯರು ಸಮಾಜ ಕಟ್ಟುವ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅತ್ಯಾಚಾರ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ವಸ್ತ್ರವಿನ್ಯಾಸವನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಮೂರು ವರ್ಷಗಳ ಮಕ್ಕಳು, ಹಸುಗೂಸುಗಳೂ ಕಾಮಪಿಶಾಚಿಗಳಿಂದ ಅತ್ಯಾತಾರಕ್ಕೆ ಒಳಗಾಗುತ್ತಿದ್ದಾರೆ. ಹುಡುಗಿಯರು ಮೈಕಾಣುವ ಬಟ್ಟೆಗಳನ್ನು ತೊಡುವುದೇ ಬಲಾತ್ಕಾರಕ್ಕೆ ಕಾರಣ ಎಂಬುದು ತಪ್ಪು. ಮೈಮುಚ್ಚುವ ಬಟ್ಟೆ ತೊಡಬೇಕಾದುದು ಸಭ್ಯತೆ. ಆದರೆ, ಕಡಿಮೆ ಪ್ರಮಾಣದ ಬಟ್ಟೆ ತೊಟ್ಟಿದ್ದರಿಂದ ಅದು ಅತ್ಯಾಚಾರಕ್ಕೆ ಲೈಸೆನ್ಸ್ ಕೊಟ್ಟಂತಲ್ಲ. ಮಹಿಳೆಯರನ್ನು ನೋಡುವ ಸಮಾಜದ ದೃಷ್ಟಿಕೋನ ಮೊದಲು ಬದಲಾಗಬೇಕು ಎಂದು ಹೇಳಿದರು.

ಎಐಎಂಎಸ್ಸೆಸ್ ರಾಜ್ಯಾಧ್ಯಕ್ಷೆ ಎಂ.ಎನ್.ಮಂಜುಳಾ, ಮುಖಂಡರಾದ ಕೆ.ಭಾರತಿ, ಜ್ಯೋತಿ ಕುಕ್ಕುವಾಡ ಇತರರು ಇದ್ದರು.

- - -

ಬಾಕ್ಸ್ * ಸರ್ಕಾರಗಳಿಂದಲೂ ಶೋಷಣೆ: ಮಂಜುನಾಥ ಕೈದಾಳೆ ಟೀಕೆ ಸಮ್ಮೇಳನ ಉದ್ಘಾಟಿಸಿದ ಎಐಯುಟಿಯುಸಿ ಜಿಲ್ಲಾ ಮುಖಂಡ ಮಂಜುನಾಥ ಕೈದಾಳೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದರೂ ಮಹಿಳೆಯರಿಗೆ ಸಮಾನತೆಯೆಂಬುದು ಮರೀಚಿಕೆಯಾಗಿದೆ. ಮಹಿಳೆಯರು ರಾತ್ರಿ ಪಾಳಿಯಲ್ಲೂ ಕೆಲಸ ಮಾಡಬೇಕೆಂಬ ಸರ್ಕಾರದ ನಿಯಮವು ಆಧುನಿಕ ಜೀತ ಪದ್ಧತಿಯೇ ಆಗಿದೆ. ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಭದ್ರತೆ ಕೊಡಬೇಕಾದ ಸರ್ಕಾರಗಳೇ ಶೋಷಣೆಗೀಡು ಮಾಡುತ್ತಿವೆ ಎಂದು ಆರೋಪಿಸಿದರು. ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಸಹಾಯಕರು ಕೆಲವೇ ಕೆಲವು ಬಿಡಿಗಾಸಿಗಾಗಿ ನಿಸ್ವಾರ್ಥದಿಂದ ದುಡಿಯುತ್ತಿದ್ದಾರೆ. ಅಂತಹವರ ಸೇವೆ ಕಾಯಂಗೊಳಿಸುವ, ಗೌರವಯುತ ವೇತನ ನೀಡಬೇಕೆಂಬ ಕನಿಷ್ಠ ಪರಿಜ್ಞಾನ, ಕಾಳಜಿಯೂ ಇಲ್ಲದ ಸರ್ಕಾರಗಳು ನಮ್ಮನ್ನು ಆಳುತ್ತಿವೆ. ಸಮಾನತೆ ಬಗ್ಗೆ ಮಾತನಾಡುವ ಸರ್ಕಾರದ ಪ್ರತಿನಿಧಿಗಳೇ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- - - -15ಕೆಡಿವಿಜಿ2, 3:

ದಾವಣಗೆರೆಯಲ್ಲಿ ಶನಿವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಸಮ್ಮೇಳನದಲ್ಲಿ ಎಸ್.ಶೋಭಾ ಮಾತನಾಡಿದರು.