ಸಾರಾಂಶ
ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೀಡಲಾಗಿದ್ದ ‘ಒನ್ ಟೈಮ್ ಸೆಟಲ್‌ಮೆಂಟ್’ (ಒಟಿಎಸ್) ಯೋಜನೆ ಶನಿವಾರಕ್ಕೆ ಮುಕ್ತಾಯಗೊಂಡಿದ್ದು, ಶನಿವಾರ ರಾತ್ರಿ 10 ಗಂಟೆ ವೇಳೆ ₹3,758 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೀಡಲಾಗಿದ್ದ ‘ಒನ್ ಟೈಮ್ ಸೆಟಲ್‌ಮೆಂಟ್’ (ಒಟಿಎಸ್) ಯೋಜನೆ ಶನಿವಾರಕ್ಕೆ ಮುಕ್ತಾಯಗೊಂಡಿದ್ದು, ಶನಿವಾರ ರಾತ್ರಿ 10 ಗಂಟೆ ವೇಳೆ ₹3,758 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು.ಕಳೆದ ಫೆಬ್ರವರಿಯಲ್ಲಿ ಒಟಿಎಸ್ ಯೋಜನೆ ಆರಂಭಿಸಲಾಗಿತ್ತು. ಮೂರು ಬಾರಿ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಶನಿವಾರ ತಡ ರಾತ್ರಿ 12 ಗಂಟೆ ಯೋಜನೆ ಅಂತ್ಯಗೊಳಿಸಲಾಗಿದೆ. ಕೊನೆಯ ಕ್ಷಣದಲ್ಲಿ ಯೋಜನೆಯ ಲಾಭ ಪಡೆಯುವುದಕ್ಕೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ತಡ ರಾತ್ರಿವರೆಗೂ ಆನ್ ಲೈನ್ ಮೂಲಕ ಪಾವತಿ ಮಾಡುವುದು ಕಂಡು ಬಂತು.
ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಸಾಧ್ಯವಾಗದವರು, ಹತ್ತಿರದ ಬಿಬಿಎಂಪಿಯ ಉಪ ಕಂದಾಯ ವಿಭಾಗದ ಕಚೇರಿಗೆ, ವಲಯ ಕಚೇರಿಗಳಿಗೆ ಭೇಟಿ ನೀಡಿ ಚಕ್ ಹಾಗೂ ಡಿಡಿ ನೀಡಿ ಪಾವತಿ ಮಾಡಿದ್ದಾರೆ.ಶನಿವಾರ ರಾತ್ರಿ 10 ಗಂಟೆಗೆ ₹3,758 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಚೆಕ್ ಮತ್ತು ಡಿಡಿ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿದೆ. ಆ ಮೊತ್ತದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮಿದೇವಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ತಡ ರಾತ್ರಿವರೆಗೆ ಕೆಲಸ: ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಶನಿವಾರ ರಾತ್ರಿ 9 ಗಂಟೆವರೆಗೆ ಕಡ್ಡಾಯವಾಗಿ ಹಾಜರಾಗಿರುವಂತೆ ಸೂಚನೆ ನೀಡಲಾಗಿತ್ತು. ಇಚ್ಚೆ ಇರುವ ಅಧಿಕಾರಿ ಮತ್ತು ಸಿಬ್ಬಂದಿ ತಡ ರಾತ್ರಿ 12 ಗಂಟೆವರೆಗೆ ಕಾರ್ಯ ನಿರ್ವಹಿಸಬಹುದಾಗಿದೆ. ರಾತ್ರಿ 12 ಗಂಟೆವರೆಗೆ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡುವುದಾಗಿ ಬಿಬಿಎಂಪಿ ತಿಳಿಸಿತ್ತು. ಹೀಗಾಗಿ, ಕಂದಾಯ ವಿಭಾಗದ ಎಲ್ಲಾ ಅಧಿಕಾರಿಗಳು ತಡ ರಾತ್ರಿವರೆಗೆ ಕಚೇರಿಯಲ್ಲಿ ಹಾಜರಿದ್ದು ಕಾರ್ಯ ನಿರ್ವಹಿಸಿದ್ದಾರೆ ಎಂದು ಲಕ್ಷ್ಮಿದೇವಿ ತಿಳಿಸಿದ್ದಾರೆ.