ಮೂರ್ನಾಡಿನಲ್ಲಿ ದತ್ತಿನಿಧಿ ಹಸ್ತಾಂತರ, ಕಣ್ಮರೆಯಾದ ಕಾಂತಮಣಿ ಪುಸ್ತಕ ಬಿಡುಗಡೆ

| Published : Jul 29 2025, 01:47 AM IST

ಸಾರಾಂಶ

ಮೂರ್ನಾಡು ಹೋಬಳಿ ಶಿಕ್ಷಕರಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡುವಿನ ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥ ದತ್ತಿನಿಧಿ ಸ್ವೀಕಾರ, ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರು ರಚಿಸಿರುವ ಪತ್ತೆದಾರಿ ಕಾದಂಬರಿ “ಕಣ್ಮರೆಯಾದ ಕಾಂತಮಣಿ " ಪುಸ್ತಕ ಬಿಡುಗಡೆ ಮತ್ತು ಮೂರ್ನಾಡು ಹೋಬಳಿ ಶಾಲೆಗಳ ಶಿಕ್ಷಕರಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.ಮೂರ್ನಾಡುವಿನ ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳಿದ್ದು, ಮೂರ್ನಾಡಿನಲ್ಲಿ ಇದೇ ಮೊದಲ ಬಾರಿಗೆ ದತ್ತಿನಿಧಿ ಸ್ಥಾಪನೆ ಮಾಡಿರುವುದು ಪ್ರಶಂಸನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರು ಮುಂದಿನ ದಿನಗಳಲ್ಲಿ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಕನ್ನಡ ಪ್ರೇಮ ಇತರರಿಗೆ ಮಾದರಿಯಾಗಿದೆ:

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್ ಮಾತನಾಡಿ ಮೂರ್ನಾಡಿನ ಜನರ ಕನ್ನಡ ಪ್ರೇಮ ಇತರರಿಗೆ ಮಾದರಿಯಾಗಿದೆ, ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪರಿಶ್ರಮದಿಂದ ಕನ್ನಡಪರ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂರ್ನಾಡುವಿನ ನಿವೃತ್ತ ದೈಹಿಕ ಶಿಕ್ಷಕರು ಹಾಗೂ ಕಾಫಿ ಬೆಳೆಗಾರರಾದ ಕಂಬಿರಂಡ ಕಿಟ್ಟು ಕಾಳಪ್ಪ ಅವರು ಮಾತನಾಡಿ ಕನ್ನಡನಾಡು ನುಡಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ಪೋಷಕರು ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕು ಎಂದು ಕರೆ ನೀಡಿದರು.‘ಕಣ್ಮರೆಯಾದ ಕಾಂತಮಣಿ’ ಕಾದಂಬರಿಯ ರಚನೆಕಾರ ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರು ಮಾತನಾಡಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಆಸಕ್ತಿ ಎಲ್ಲರಲ್ಲೂ ಮೂಡಬೇಕು:

ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಹಿರಿಯ ಪತ್ರಕರ್ತ ಕುಡೆಕಲ್ ಸಂತೋಷ್ ಹಾಗೂ ಬರಹಗಾರ್ತಿ ಸುಶೀಲ ಅವರು ಮಾತನಾಡಿ ಸ್ಪರ್ಧೆಗೆ 14 ಪ್ರಬಂಧಗಳು ಬಂದಿದ್ದು, ಎಲ್ಲವೂ ಉತ್ತಮ ಬರಹಗಳಾಗಿದ್ದವು. ತೀರ್ಪು ನೀಡಲು ಕಷ್ಟವಾಯಿತು, ಈ ರೀತಿಯ ಕನ್ನಡ ಪ್ರೇಮ ಮತ್ತು ಆಸಕ್ತಿ ಎಲ್ಲರಲ್ಲೂ ಮೂಡಬೇಕು ಎಂದರು.ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಬಿ.ಎಸ್.ಕುಶನ್ ರೈ ಅವರು ಮಾತನಾಡಿ ಮೂರ್ನಾಡಿನಲ್ಲಿ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಹಿತ್ಯ ಪರಿಷತ್, ಬರಹಗಾರರು ಹಾಗೂ ಸ್ಥಳೀಯ ಜನರ ಕನ್ನಡಾಭಿಮಾನ ಅತ್ಯಂತ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೊದ್ದೂರು ಗ್ರಾ.ಪಂ ಅಧ್ಯಕ್ಷ ಎಚ್.ಎ.ಹಂಸ ಅವರು ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಸಮಯವನ್ನು ಮೀಸಲಿಟ್ಟು ಶ್ರಮ ವಹಿಸಬೇಕು, ಗ್ರಾ.ಪಂ ಗ್ರಂಥಾಲಯಗಳಲ್ಲಿ ಜಿಲ್ಲೆಯ ಸಾಹಿತಿಗಳ ಪುಸ್ತಕಗಳನ್ನು ಇಡುವಂತಾಗಬೇಕು. ಕನ್ನಡಪರ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.ದತ್ತಿನಿಧಿ ಹಸ್ತಾಂತರ:ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥವಾಗಿ ಮೂರ್ನಾಡುವಿನ ನಿವೃತ್ತ ಶಿಕ್ಷಕಿ ಕೊಕ್ಕಲೆರ ಬೋಜಮ್ಮ ಹಾಗೂ ಮಕ್ಕಳು ಶಿಕ್ಷಕರ ಪ್ರಬಂಧ ಸ್ಪರ್ಧೆಗಾಗಿ ಸ್ಥಾಪಿಸಿರುವ 30 ಸಾವಿರ ರು.ದ ದತ್ತಿನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರು ಪರಿಷತ್ ನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರಿಗೆ ಹಸ್ತಾಂತರಿಸಿದರು.ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರು ಬರೆದಿರುವ 23ನೇ ಪುಸ್ತಕ ‘ಕಣ್ಮರೆಯಾದ ಕಾಂತಮಣಿ’ಯನ್ನು ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ದಂಬೆಕೋಡಿ ಸುಶೀಲ ಅವರು ಬಿಡುಗಡೆ ಮಾಡಿದರು. "ಕನ್ನಡ ಭಾಷೆಯ ಬೆಳವಣಿಗೆಗೆ ಮಾರ್ಗೋಪಾಯಗಳು " ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕಿಯರಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸಾಹಿತಿಗಳಾದ ಕಿಗ್ಗಾಲು ಗಿರೀಶ್ ಹಾಗೂ ದಂಬೇಕೋಡಿ ಸುಶೀಲ ಅವರನ್ನು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಪಿಎಂ ಶ್ರೀ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಎನ್.ಪುಷ್ಪಾವತಿ ಉಪಸ್ಥಿತರಿದ್ದರು.