ಕೋರ್ಟ್‌ ತೀರ್ಪು ನೀಡಿದಂತೆ ಒಳ ಮೀಸಲಾತಿ ಜಾರಿ ಮಾಡಿ

| Published : Aug 20 2024, 12:46 AM IST

ಸಾರಾಂಶ

ಗುಬ್ಬಿಯಲ್ಲಿ ದಲಿತ ಸಂಘಟನೆಗಳಿಂದ ಮೆರವಣಿಗೆ

ಕನ್ನಡ ಪ್ರಭ ವಾರ್ತೆ ಗುಬ್ಬಿ

ಎಸ್ಸಿ, ಎಸ್ಟಿ ಒಳ ಮೀಸಲಾತಿ ವರ್ಗೀಕರಣ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅನುಷ್ಠಾನಕ್ಕೆ ಒತ್ತಾಯಿಸಿ ದಸಂಸ ಎಲ್ಲಾ ಸದಸ್ಯರು ತಹಸೀಲ್ದಾರ್ ಬಿ.ಆರತಿಗೆ ಸೋಮವಾರ ಮನವಿ ಸಲ್ಲಿಸಿದರು.ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ದಲಿತ ಪರ ಸದಾ ಕಾಲ ನಿಂತಿರುವ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ವರ್ಗೀಕರಣ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ಕೆಲಸ ಶೀಘ್ರದಲ್ಲಿ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿಗೂ ಶೋಷಿತ ಪರ ನಿಂತವರು. ನಾನೂ ಕೂಡಾ ಮೀಸಲಾತಿ ಪರ ನಿಂತು ಹೋರಾಟಕ್ಕೆ ಬೆಂಬಲ ನೀಡಿದ್ದೇನೆ. ಒಳ ಮೀಸಲಾತಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದರು.

ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ, ಸತತ ಮೂರು ದಶಕದ ದಸಂಸ ಜೊತೆಗೂಡಿ ಅನೇಕ ಸಂಘಟನೆಗಳು ಹೋರಾಟ ನಡೆಸಿದ್ದರಿಂದ ಒಳ ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೀಸಲಾತಿ ಕುರಿತಂತೆ ಆಂಧ್ರಪ್ರದೇಶ, ತಮಿಳುನಾಡು, ಬಿಹಾರ ಅನೇಕ ರಾಜ್ಯದಲ್ಲಿ ಹೋರಾಟ ನಡೆದಿತ್ತು. ನ್ಯಾಯಾಲಯ ಆದೇಶದಂತೆ ಆಯಾ ರಾಜ್ಯಗಳ ಸರ್ಕಾರ ಅನುಷ್ಠಾನ ತರಬೇಕಿದೆ. ಪರಿಶಿಷ್ಟ ಜಾತಿಗಳ ಸಮಗ್ರ ಅಭ್ಯುದಯಕ್ಕೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ದಸಂಸ ತಾಲೂಕು ಸಂಚಾಲಕ ಕಡಬ ಶಂಕರ್, ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್, ಎನ್.ಎ.ನಾಗರಾಜು, ಪಾಂಡುರಂಗಪ್ಪ, ದಸಂಸ ಸಂಘಟನಾ ಸಂಚಾಲಕರಾದ ದೇವರಾಜ್ ಮಡೇನಹಳ್ಳಿ, ನಟರಾಜ್ ಕುಂದರನಹಳ್ಳಿ, ರವೀಶ್, ಮಹೇಶ್, ಸೋಮಶೇಖರ್, ರಂಗಸ್ವಾಮಿ, ಯೋಗೀಶ್, ಕಲ್ಲೂರು ರವಿಕುಮಾರ್, ಕಲ್ಲಪ್ಪ, ಮಲ್ಲಿಕಾರ್ಜುನಯ್ಯ, ಮನೋಹರ್, ನಾಗಭೂಷಣ ಇತರರು ಇದ್ದರು.