ಸಾರಾಂಶ
ನಡು ರಾತ್ರಿಯೇ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ । ಎಸ್ಪಿ ವಿಕ್ರಂ ಅಮಟೆ ಮನವೊಲಿಕೆ ನಂತರ ಹಿಂಪಡೆದ ಹೋರಾಟ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಭಾನುವಾರ ರಾತ್ರಿ ಎರಡು ಕಾರುಗಳ ಚಾಲಕರ ಮಧ್ಯೆ ನಡೆದ ಮಾತಿನ ಚಕಮಕಿಯಲ್ಲಿ ಬೆಂಗಳೂರಿನಿಂದ ಕಡೂರಿಗೆ ಹಿಂದುರುಗುತ್ತಿದ್ದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯ ಸಂದೇಶ್ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ನಡು ರಾತ್ರಿಯೇ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸ್ವತಃ ಜಿಲ್ಲಾ ಎಸ್ಪಿ ವಿಕ್ರಂ ಅಮಟೆ ಕಡೂರಿಗೆ ಆಗಮಿಸಿ ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿ ಕ್ರಮವಹಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.ತಮ್ಮ ಮೇಲೆ ಕಡೂರು ಪಟ್ಟಣದ ಸಂತೋಷ್ ಸೇರಿದಂತೆ 5 ಜನರ ಗುಂಪು ಹಲ್ಲೆ ಮಾಡಿ ಅವಾಚ್ಯ ಶಬ್ದ ಗಳಿಂದ ನಿಂದಿಸಿರುವ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಎಂಜಿನಿಯರ್ ಸಿ.ಎಲ್.ಸಂದೇಶ್ ದೂರು ನೀಡಿದ್ದಾರೆ. ಘಟನೆಯ ವಿವರ: ಮೂಲತಃ ಚಿಕ್ಕಮಗಳೂರಿನವರಾದ ಸಂದೇಶ್ ಬೆಂಗಳೂರಿನಿಂದ ಕಡೂರಿನಲ್ಲಿರುವ ಪತ್ನಿ ಮನೆಗೆ ಭಾನುವಾರ ಬರುತ್ತಿದ್ದಾಗ ಕಡೂರಿನ ಬಸವೇಶ್ವರ ವೃತ್ತದಲ್ಲಿ ಎದುರಿಗೆ ಇನ್ನೋವಾ ಕಾರಿನಲ್ಲಿ ಬಂದವರು ಅವರ ಕಾರಿನ ಮುಂದೆ ನಿಲ್ಲಿಸಿದ್ದರು. ಇದನ್ನು ಕಂಡ ಸಂದೇಶ್ ಕೈಸನ್ನೆ ಮಾಡಿ ಕಾರನ್ನು ಮುಂದೆ ತೆಗೆಯಲು ತಿಳಿಸಿದಾಗ ಅವರ ಕಾರಿಗೆ ಅಡ್ಡವಾಗಿ ಇನ್ನೋವಾ ಕಾರು ನಿಲ್ಲಿಸಿ ಕೆಟ್ಟ ಪದಗಳಿಂದ ನಿಂದಿಸಿದ್ದಲ್ಲದೆ ಅವರನ್ನು ಕೆಳಗೆ ಇಳಿಸಿ 5 ಜನ ಸೇರಿ ಕೈ ಯಿಂದ ಮೈಕೈಗೆ, ಕುತ್ತಿಗೆಗೆ, ಬೆನ್ನಿಗೆ ಹೊಡೆದು, ನಂತರ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಹಾಕಿದರು.
ನನಗೆ ಏಕೆ ಹೊಡೆಯುತ್ತಿರಿ ಎಂದು ಕೇಳಿದ್ದಕ್ಕೆ ಪುನಃ ಕೆಟ್ಟ ಪದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಕೆಳಗೆ ಬೀಳಿಸಿಕೊಂಡು ಕಾಲಿನಿಂದ ಒದೆಯುವಾಗ ಸ್ಥಳೀಯರು ಬಂದು ಗಲಾಟೆ ಮಾಡಿ ಬಿಡಿಸಿದ್ದರು. ಈ ಸಂಭಂಧ ತಮ್ಮ ಮೇಲೆ ಹಲ್ಲೆ ಮಾಡಿದ ಸಂತೋಷ್ ಹಾಗೂ ಆತನ ನಾಲ್ಕು ಜನ ಸ್ನೇಹಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸಂದೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಅಳಿಯನಾದ ಸಂದೇಶ್ ಮೇಲೆ ನಡೆದ ಹಲ್ಲೆ ಖಂಡಿಸಿ, ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿ ಬೆಳ್ಳಿ ಪ್ರಕಾಶ್ ನೇತೃತ್ವದಲ್ಲಿ ಕಡೂರು ಠಾಣೆ ಮುಂದೆ ನೂರಾರು ಜನರು ಪ್ರತಿಭಟನೆ ನಡೆಸಿದರು.
ಈ ವೇಳೆ ವೃತ್ತ ನಿರೀಕ್ಷಕರ ಮಧ್ಯೆ ಮಾತು ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ ಮಧ್ಯ ರಾತ್ರಿ ಕಡೂರಿಗೆ ಬಂದು ಮಾಜಿ ಶಾಸಕ ರೊಂದಿಗೆ ಮಾತನಾಡಿ ಆರೋಪಿ ಸಂತೋಷ್ ಮತ್ತು ನಾಲ್ಕು ಜನರ ಮೇಲೆ ಎಫ್.ಐ.ಆರ್ ದಾಖಲಿಸಿ ಆರೋಪಿಗಳನ್ನು ಹಿಡಿಯಲು ತಂಡ ರಚಿಸಿರುವುದಾಗಿ ಮಾಹಿತಿ ನೀಡಿದ ನಂತರ ಮಧ್ಯ ರಾತ್ರಿ 2 ಗಂಟೆಯಲ್ಲಿ ಪ್ರತಿಭಟನೆ ಹಿಂಪಡೆದು ಮನೆಗಳತ್ತ ತೆರಳಿದರು.ಆರೋಪಿ ಸಂತೋಷ್ ಮತ್ತು ಸಹಚರರು ಸೋಮವಾರ ಸಂಜೆವರೆಗೂ ಪತ್ತೆಯಾಗಿಲ್ಲ. ಅವರು ಊರು ಬಿಟ್ಟಿದ್ದು ಪೊಲೀಸ್ ಅವರನ್ನು ಹುಡುಕುತ್ತಿದ್ದಾರೆ.
;Resize=(128,128))
;Resize=(128,128))
;Resize=(128,128))