ಆಟೋ ಚಾಲಕನ ಪುತ್ರಿಗೆ ಎಂಜಿನಿಯರಿಂಗ್‌ನಲ್ಲಿ ಎರಡನೇ ರ್‍ಯಾಂಕ್

| N/A | Published : Jul 26 2025, 01:30 AM IST / Updated: Jul 26 2025, 11:19 AM IST

ಸಾರಾಂಶ

ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿನಿ ವಿ.ಜೆ. ಜಾಯ್ಸ್ ಲೀನಾ 2024-25ನೇ ಶೈಕ್ಷಣಿಕ ಸಾಲಿನ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಗಳಿಸಿದ್ದಾರೆ.  

  ಕುಶಾಲನಗರ :  ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿನಿ ವಿ.ಜೆ. ಜಾಯ್ಸ್ ಲೀನಾ 2024-25ನೇ ಶೈಕ್ಷಣಿಕ ಸಾಲಿನ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಗಳಿಸಿದ್ದಾರೆ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸಿದ್ದು, ಕೊಡಗು ಜಿಲ್ಲೆಯ ಏಕೈಕ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇದೇ ಪ್ರಥಮ ಬಾರಿಗೆ ಈ ಗೌರವಕ್ಕೆ ಭಾಜನವಾಗಿದೆ.

ಇತ್ತೀಚೆಗೆ ಬೆಳಗಾಂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ 25ನೇ ಘಟಿಕೋತ್ಸವದಲ್ಲಿ ಜಾಯ್ಸ್ ಲೀನಾ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.ಜಾಯ್ಸ್ ಲೀನಾ ಕುಶಾಲನಗರ ಪಟ್ಟಣದ ಬಸವೇಶ್ವರ ಬಡಾವಣೆಯ ಆಟೋ ಚಾಲಕ ಜೋಸೆಫ್ ವಂದನಾಥ್ ಮತ್ತು ಜೋಸೆಫಿನ್ ದಂಪತಿ ಪುತ್ರಿ.ಜಾಯ್ಸ್ ಲೀನಾ, ಕುಶಾಲನಗರ ಫಾತಿಮಾ ಕಾನ್ವೆಂಟ್‌ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿ, ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ನಂತರ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

ಉನ್ನತ ಶಿಕ್ಷಣಕ್ಕೆ ಆರ್ಥಿಕ ಮುಗ್ಗಟ್ಟು:ಎಂಜಿನಿಯರಿಂಗ್‌ ರ್‍ಯಾಂಕ್ ವಿಜೇತ ವಿದ್ಯಾರ್ಥಿನಿ ಜಾಯ್ಸ್ ಲೀನಾ ಅವರ ಪೋಷಕರು ಆರ್ಥಿಕವಾಗಿ ಹಿಂದುಳಿದಿದ್ದು, ತಂದೆ ಜೋಸೆಫ್ ವಂದನಾಥ್ ಕುಶಾಲನಗರದಲ್ಲಿ ಆಟೋ ಚಾಲಕರಾಗಿ ಕಳೆದ ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ.ತಮ್ಮ ಮಗಳು ಎಂಜಿನಿಯರಿಂಗ್‌ನಲ್ಲಿ ರ್‍ಯಾಂಕ್ ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಪುತ್ರಿ ಹೆಚ್ಚಿನ ವ್ಯಾಸಂಗಕ್ಕಾಗಿ ಹೋಗುವ ಆಸಕ್ತಿ ಹೊಂದಿದ್ದು, ಹಣಕಾಸಿನ ಮುಗ್ಗಟ್ಟು ಬಗ್ಗೆ ಕನ್ನಡಪ್ರಭದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.

ಪುತ್ರಿ ಮುಂದೆ ಎಂಟೆಕ್, ಎಂಬಿಎ ವ್ಯಾಸಂಗ ಮಾಡುವ ಬಯಕೆ ಇರುವುದಾಗಿ ಹೇಳಿದ ಅವರು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಹಣಕಾಸಿನ ಸಹಾಯದ ಅಗತ್ಯ ಇರುವುದಾಗಿ ಅವರು ತೋಡಿಕೊಂಡರು.

ಹಣದ ಕೊರತೆ ಉಂಟಾದಲ್ಲಿ ತನ್ನ ಮುಂದಿನ ವ್ಯಾಸಂಗ ಮುಂದುವರಿಸಲು ಆಗದಿದ್ದಲ್ಲಿ ಉದ್ಯೋಗದ ಕಡೆ ಚಿತ್ತ ಹರಿಸಬೇಕಾಗುತ್ತದೆ ಎಂದು ರ್‍ಯಾಂಕ್ ವಿಜೇತ ವಿದ್ಯಾರ್ಥಿನಿ ಜಾಯ್ಸ್ ಲೀನಾ ತಿಳಿಸಿದ್ದಾರೆ.

Read more Articles on