ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಕಾಲದಲ್ಲಿ ನಾಲೆಗಳ ಹೂಳು ತೆಗೆಸದೆ, ಜಂಗಲ್ ಕಟ್ಟಿಂಗ್ ಮಾಡಿಸದ ನೀರಾವರಿ ಇಲಾಖೆ ಎಂಜಿನಿಯರ್‌ಗಳ ವಿರುದ್ಧ ಶಾಸಕ ಎಚ್.ಟಿ. ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ವಿವಿಧ ಗ್ರಾಮಗಳ ಮೂಲಕ ಹೇಮಾವತಿ ನದಿ ನಾಲೆ ಏರಿ ಮೇಲೆ ಹೇಮಾವತಿ ಜಲಾಶಯ ಯೋಜನೆ ಚನ್ನರಾಯಪಟ್ಟಣ ವಿಭಾಗದ ಅಧೀಕ್ಷಕ ಎಂಜಿನಿಯರ್ ಎಂ.ಎನ್ ಕಿಶೋರ್ ಜೊತೆ ಶಾಸಕರು ಸಂಚರಿಸಿ ಪರಿಶೀಲನೆ ನಡೆಸಿದರು.
ತಾಲೂಕಿನ ಬೊಮ್ಮೇನಹಳ್ಳಿ, ಬೂಕನಕೆರೆ, ಮತ್ತೀಕೆರೆ, ಯಗಚಗುಪ್ಪೆ, ಹೊಸ ಮಾವಿನಕೆರೆ ಮುಂತಾದೆಡೆ ಹೇಮಾವತಿ ನಾಲೆ ಏರಿಯ ಮೇಲೆ ಸಂಚರಿಸಿದ ವೇಳೆ ಕೊನೇ ಭಾಗಕ್ಕೆ ಇದುವರೆಗೂ ನೀರು ಹರಿಯದಿರುವ ಬಗ್ಗೆ ರೈತರ ದೂರುಗಳನ್ನು ಆಲಿಸಿ ಎಂಜಿನಿಯರ್‌ಗಳನ್ನು ತರಾಟೆ ತೆಗೆದುಕೊಂಡರು.ನಾಲಾ ಬಯಲಿನಲ್ಲಿ ನಾಲೆ ಅವ್ಯವಸ್ಥೆ ಮತ್ತು ರೈತರ ಸಮಸ್ಯೆಗಳನ್ನು ಕಣ್ಣಾರೆ ಕಂಡ ಶಾಸಕರು ಆನಂತರ ಪಟ್ಟಣದ ಎಚ್ಎಲ್‌ಬಿಸಿ ನಂ.03 ಉಪ ವಿಭಾಗದಲ್ಲಿ ಎಂಜಿನಿಯರುಗಳ ಸಭೆ ನಡೆಸಿ ಅವರ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.
ನಾಲೆಗಳ ಹೂಳು ತೆಗೆದು ಜಂಗಲ್ ಕಟ್ಟಿಂಗ್ ಕಾರ್ಯಕ್ಕೆ ರಾಜ್ಯ ಸರ್ಕಾರ 1 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ. ಆದರೆ, ಎಂಜಿನಿಯರ್‌ಗಳು ಅನುದಾನ ಬಳಸಿ ಹೂಳು ಮತ್ತು ಜಂಗಲ್ ಕಟ್ಟಿಂಗ್ ಮಾಡಿಸುವಲ್ಲಿ ಅಸಡ್ಡೆ ತೋರಿದ್ದಾರೆ ಎಂದು ದೂರಿದರು.ಹರಿಯುತ್ತಿರುವ ನಾಲೆ ನೀರಿನಲ್ಲಿಯೇ ಜೆಸಿಬಿ ಯಂತ್ರಗಳ ಮೂಲಕ ನೀರು ಕಲಕಿ ರಾಡಿ ಎಬ್ಬಿಸುವ ಮೂಲಕ ಹೂಳೆತ್ತುವ ನಾಟಕ ಮಾಡಲಾಗಿದೆ. ಕೆಲವು ಕಡೆ ತೆಗೆದ ಹೂಳನ್ನು ನಾಲೆ ಏರಿ ಮೇಲೆ ಹಾಕಿ ರೈತರು ತಿರುಗಾಟಕ್ಕೆ ತೊಂದರೆ ಪಡಿಸಲಾಗಿದೆ. ಎತ್ತಿದ ಹೂಳು ಮತ್ತೆ ಕಾಲುವೆಗೆ ಬೀಳುವಂತೆ ಮಾಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು, ಹೇಮಾವತಿ ಮುಖ್ಯನಾಲೆಯ ಸರಪಳಿ 49,55, 58 ಸೇರಿದಂತೆ ವಿತರಣಾ ನಾಲೆಗಳ ಹೂಳು ಮತ್ತು ಜಂಗಲ್ ತೆಗೆಸಿ ನಾಲಾ ವ್ಯಾಪ್ತಿಯ ಕೊನೆ ಬಯಲಿನ ರೈತರಿಗೆ ನೀರು ತಲುಪಿಸುವ ಕೆಲಸ ಮಾಡಬೇಕು. ಆದರೆ, ಹೇಮಾವತಿ ಅಣೆಕಟ್ಟೆ ತುಂಬಿದ್ದರೂ ನಮ್ಮ ರೈತರು ನೀರಿಗಾಗಿ ಪರಿತಪಿಸುವ ಸನ್ನಿವೇಶವನ್ನು ಎಂಜಿನಿಯರುಗಳು ಸೃಷ್ಟಿ ಮಾಡಿದ್ದಾರೆ ಬೇಸರ ವ್ಯಕ್ತಪಡಿಸಿದರು.ನಾಲೆಯಲ್ಲಿ ಶಿಲ್ಟ್ ಮತ್ತು ಜಂಗಲ್ ತೆಗೆಸಿ ರೈತರಿಗೆ ನೀರು ಕೊಡದಿದ್ದರೆ ನಾನು ಶಾಸಕ ಎನ್ನುವುದನ್ನು ಮರೆತು ರೈತರೊಂದಿಗೆ ಕಚೇರಿ ಎದುರು ಮಲಗುತ್ತೇನೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಸಿಬ್ಬಂದಿ ಕೊರತೆ:ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಕೊರತೆಯಿದೆ. ಇಲ್ಲಿನ ಅನೇಕ ನೌಕರರನ್ನು ರಾಜ್ಯ ಸರ್ಕಾರ ಡೆಪ್ಯೂಟೇಷನ್ ಮಾಡಿ ಬೇರೆ ಕಡೆ ನಿಯೋಜಿಸಿದೆ. ಅಗತ್ಯ ಸಿಬ್ಬಂದಿಯಿಲ್ಲದೆ ನಾವು ಕರ್ತವ್ಯ ನಿರ್ವಹಿಸುವುದಾದರೂ ಹೇಗೆ ಎಂದು ಕೆಲವು ಎಂಜಿನಿಯರ್‌ಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಬೇರೆಡೆ ನಿಯೋಜನೆಗೊಂಡಿರುವ ಸಿಬ್ಬಂದಿ ಡೆಪ್ಯೂಟೇಷನ್ ರದ್ದುಪಡಿಸಿ ಅವರನ್ನು ಕೇಂದ್ರ ಸ್ಥಾನಕ್ಕೆ ಕರೆಸಿಕೊಳ್ಳುವ ಬಗ್ಗೆ ಸಭೆಯಲ್ಲಿದ್ದ ಅಧೀಕ್ಷಕ ಎಂಜಿನಿಯರ್ ಅವರಿಗೆ ಶಾಸಕರು ಸೂಚಿಸಿದರು.ಹಳೆಯ ತೂಬುಗಳನ್ನು ಸರಿಪಡಿಸಿ:
ಹೇಮಗಿರಿ ನಾಲೆ ಶತಮಾನಗಳಷ್ಟು ಹಳೆಯದಾಗಿದೆ. ಹಲವು ಕಡೆ ನಾಲೆ ನೀರು ವಿತರಣಾ ತೂಬುಗಳು ಹಾಳಾಗಿವೆ. ಇದರಿಂದ ರೈತರ ಜಮೀನುಗಳಿಗೆ ಅಗತ್ಯವಾದ ನೀರು ಬಿಡಲು ಮತ್ತು ಅನಗತ್ಯ ನೀರು ನಿಲ್ಲಿಸಲು ನಾಲೆಗಳಲ್ಲಿ ಮುಳುಗೇಳಬೇಕಾದ ಸ್ಥಿತಿಯಿದೆ ಎಂದರು.ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರೂ ಇಲಾಖೆ ಎಂಜಿನಿಯರ್‌ಗಳು ಮಾತ್ರ ಅಗತ್ಯ ಎಸ್ಟಿಮೇಟ್ ಮಾಡಿ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ನಾಲೆಯಲ್ಲಿ ಮುಳುಗಿ ರೈತರು ಸಾಯುವ ಮುನ್ನ ಹಾಳಾಗಿರುವ ತೂಬುಗಳನ್ನು ಸರಿಪಡಿಸುವಂತೆ ಶಾಸಕರು ಸೂಚಿಸಿದರು.
ಕಾಮಗಾರಿ ನಿರ್ವಹಣೆಗೆ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆದರೆ ಕೆಲವು ಗುತ್ತಿಗೆದಾರರು ಬಿಲೋ ಟೆಂಡರ್ ಹಾಕಿಕೊಂಡು ಕಾಮಗಾರಿ ಗುತ್ತಿಗೆ ಪಡೆಯುತ್ತಾರೆ. ಸಕಾಲಕ್ಕೆ ಕಾಮಗಾರಿ ನಿರ್ವಹಿಸದೆ ಇಲಾಖೆ ಪ್ರಗತಿಗೆ ತಲೆನೋವಾಗುತ್ತಿದ್ದಾರೆಂದು ಕೆಲವು ಎಂಜಿನಿಯರ್‌ಗಳು ಸಭೆ ಮುಂದಿಟ್ಟರು.ಅಧೀಕ್ಷಕ ಎಂಜಿನಿಯರ್ ಸ್ಥಳಕ್ಕೆ ಬಂದಿದ್ದರೂ ಕೆಲವು ಎಂಜಿನಿಯರ್‌ಗಳು ಸ್ಥಳಕೆ ಬರಲಿಲ್ಲ. ಸ್ವತ: ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್ ಮೊಬೈಲ್ ಕರೆ ಮಾಡಿದರೂ ಕರೆ ಸ್ವೀಕರಿಸದೆ ಕಟ್ ಮಾಡುತ್ತಿದ್ದರು. ಇದರಿಂದ ಶಾಸಕರು ಆಕ್ರೋಶಗೊಂಡರು.
ತಕ್ಷಣ ಕಾವೇರಿ ನೀರಾವರಿ ನಿಗಮದ ಎಂ.ಡಿ. ಜೊತೆ ದೂರವಾಣಿ ಮೂಲಕ ಮಾತನಾಡಿ, ಅಧೀಕ್ಷಕ ಎಂಜಿನಿಯರ್ ಕರೆ ಮಾಡಿದರೂ ಸ್ವೀಕರಿಸದೆ ಅಸಡ್ಡೆ ಮಾಡುತ್ತಿರುವ ಎಂಜಿನಿಯರ್‌ಗಳ ವಿರುದ್ಧ ಪೆನ್ ಬಳಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಸಭೆಯಲ್ಲಿ ಹೇಮಾವತಿ ಜಲಾಶಯ ಯೋಜನೆ ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್, ಎಚ್.ಎಲ್.ಬಿ.ಸಿ ನಂ.03 ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಆನಂದ್, ಎಚ್.ಎಲ್.ಬಿ.ಸಿ ನಂ.20 ವಿಭಾಗದ ಸಹಾಯಕ ಕಾರ್ಯಪಾಕ ಎಂಜಿನಿಯರ್ ವಿಶ್ವನಾಥ್, ಬೂಕನಕೆರೆ ವಿಭಾಗದ ಸಹಾಯಕ ಕಾರ್ಯಪಾಕ ಎಂಜಿನಿಯರ್ ಸುಧಾ, ಆನಂದ ನಾಯಕ್, ಮಹೇಶ್, ರಾಘವೇಂದ್ರ ಸೇರಿದಂತೆ ಹಲವರು ಇದ್ದರು.