ಸಾರಾಂಶ
ಪಿಯುಸಿ ವಿದ್ಯಾರ್ಥಿಗಳ ಗುರುವಂದನೆ, ಸ್ನೇಹ ಸಮ್ಮಿಲನ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿಆಂಗ್ಲ ಮಾಧ್ಯಮದ ಮೇಲಿನ ಪಾಲಕರ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪುತ್ತಿವೆ ಎಂದು ಸಕಲೇಶಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ಆವರಣದಲ್ಲಿ 2002- 2003 ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನಪ್ರತಿನಿಧಿಗಳು, ಬುದ್ಧಿಜೀವಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದರ ಜತೆಗೆ ಇತರರಿಗೂ ಮಾಹಿತಿ ನೀಡುವುದು ಅಗತ್ಯ. ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರು ಉನ್ನತ ಶಿಕ್ಷಣ ಪಡೆದಿದ್ದು ಅದರ ಅನುಭವದಿಂದ ಮಕ್ಕಳನ್ನು ಸುಲಭ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಸುತ್ತಾರೆ. ಖಾಸಗಿ ಶಾಲೆಗಳಲ್ಲಿ ಇಂತಹ ವ್ಯವಸ್ಥೆ ಕಡಿಮೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಉಚಿತವಾಗಿರುತ್ತವೆ. ಖಾಸಗಿ ಶಾಲಾ ಕಾಲೇಜುಗಳ ನೋಂದಣಿ ಇತರೆ ಖರ್ಚುಗಳು ತುಂಬಾ ಹೊರೆಯಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಶೇಷ ಕೌಶಲ್ಯಗಳಿರುತ್ತವೆ. ಶಿಕ್ಷಕರು ಶ್ರಮವಹಿಸಿ ಗುಣಮಟ್ಟದ ಶಿಕ್ಷಣ ನೀಡಿ ಉನ್ನತ ಮಟ್ಟಕ್ಕೆ ಭವಿಷ್ಯ ರೂಪಿಸುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯವಾಗಿದೆ ಎಂದರು.‘ಸರ್ವಜ್ಞನ ವಚನಗಳು, ಡಿವಿಜಿಯವರ ಮಂಕುತಿಮ್ಮನ ಕಗ್ಗ ಇವುಗಳಿಂದ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದ್ದು ಇದನ್ನು ಮರೆಯಬಾರದು. ಹಾಗೆಯೇ ಅನ್ನ ಬೆಳವ ರೈತರು ಹಾಗೂ ಗ್ರಾಮಗಳ ಚರಂಡಿಗಳನ್ನು ಸ್ವಚ್ಛಗೊಳಿಸುವವರನ್ನು ಕಡೆಗಣಿಸಬಾರದು. ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಶ್ರದ್ಧೆ ವಹಿಸಿ ಮಾಡಿದರೆ ದೇಶದ ಅಭಿವೃದ್ಧಿಯಾಗುತ್ತದೆ’ ಎಂದು ತಿಳಿಸಿದರು.
ಉಪನ್ಯಾಸಕರಾದ ಬೀರೇಗೌಡ, ಸುಮಾ, ಜೇರುಮು, ಮುರುಳಾರಾದ್ಯ, ನಿವೃತ್ತ ಉಪನ್ಯಾಸಕಿ ನಾಗರತ್ನರಿಗೆ 2002ರ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.ರಾಜ್ಯ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಅತ್ತಿಹಳ್ಳಿ ವೇಣುಗೋಪಾಲ್, ಪೊಲೀಸ್ ಎಂ. ಎನ್. ಮೋಹನ್, ಟ್ರಾಫಿಕ್ ಪೊಲೀಸ್ ಶ್ರೀನಿವಾಸ್, ಯೋಗೇಗೌಡ, ಗ್ರಾಮ ಪಂಚಾಯತಿ ಸದಸ್ಯ ಹೊನ್ನೇಗೌಡ, ಮುಖಂಡರಾದ ರಾಮಪ್ರಸಾದ್, ಮಧುಸೂಧನ್, ಬಿ. ಎನ್. ಕೃಷ್ಣಮೂರ್ತಿ, ದೇವರಾಜ್, ಕಾಂತರಾಜ್, ಲತಾ, ಶ್ವೇತ ಹಾಜರಿದ್ದರು.
ಫೋಟೋ: ನುಗ್ಗೇಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರಮೇಶ್, ಮರುಳಾರಾಧ್ಯ, ಉಪನ್ಯಾಸಕರಾದ ಬೀರೇಗೌಡ, ಸುಮಾ, ಜೆರುಮು, ನಿವೃತ್ತ ಉಪನ್ಯಾಸಕಿ ನಾಗರತ್ನರಿಗೆ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.