ಇಂಗ್ಲಿಷ್ ಮಾಧ್ಯಮದಿಂದ ಪ್ರಾದೇಶಿಕ ಭಾಷಾ ಪುಸ್ತಕೋದ್ಯಮದ ಕೊಲೆ

| Published : Feb 04 2024, 01:30 AM IST

ಸಾರಾಂಶ

ಮಾತೃ ಭಾಷೆಯಲ್ಲಿ ಶಿಕ್ಷಣ ಕಡ್ಡಾಯ ಮಾಡದೇ ಇರುವುದರಿಂದ, ಮಕ್ಕಳಿಗೆ ಮಾತೃಭಾಷೆಯೂ ಬರುವುದಿಲ್ಲ, ಇಂಗ್ಲಿಷೂ ಸರಿಯಾಗಿ ಬರುವುದಿಲ್ಲ. ಪುಸ್ತಕಗಳ ಮಾರಾಟ ಕುಂಠಿತವಾಗಲು ಇದೇ ಪ್ರಮುಖ ಕಾರಣ. ಇದರಿಂದಾಗಿ ಪ್ರಾದೇಶಿಕ ಭಾಷೆಗಳ ಸಾಹಿತ್ಯ ನಶಿಸಿಹೋಗುತ್ತಿದೆ. ಜೈಪುರ್ ಬುಕ್‌ಮಾರ್ಕ್ ವೇದಿಕೆಯಲ್ಲಿ ನಡೆದ ಪುಸ್ತಕೋದ್ಯಮದ ಕುರಿತ ಮಾತುಕತೆಯಲ್ಲಿ ಒಕ್ಕೊರಲಿನಿಂದ ವ್ಯಕ್ತವಾದ ಅಭಿಪ್ರಾಯ ಇದು.

ಜೋಗಿ

ಕನ್ನಡಪ್ರಭ ವಾರ್ತೆ ಜೈಪುರ

‘ಮಾತೃ ಭಾಷೆಯಲ್ಲಿ ಶಿಕ್ಷಣ ಕಡ್ಡಾಯ ಮಾಡದೇ ಇರುವುದರಿಂದ, ಮಕ್ಕಳಿಗೆ ಮಾತೃಭಾಷೆಯೂ ಬರುವುದಿಲ್ಲ, ಇಂಗ್ಲಿಷೂ ಸರಿಯಾಗಿ ಬರುವುದಿಲ್ಲ. ಪುಸ್ತಕಗಳ ಮಾರಾಟ ಕುಂಠಿತವಾಗಲು ಇದೇ ಪ್ರಮುಖ ಕಾರಣ. ಇದರಿಂದಾಗಿ ಪ್ರಾದೇಶಿಕ ಭಾಷೆಗಳ ಸಾಹಿತ್ಯ ನಶಿಸಿಹೋಗುತ್ತಿದೆ.’

ಜೈಪುರ್ ಬುಕ್‌ಮಾರ್ಕ್ ವೇದಿಕೆಯಲ್ಲಿ ನಡೆದ ಪುಸ್ತಕೋದ್ಯಮದ ಕುರಿತ ಮಾತುಕತೆಯಲ್ಲಿ ಒಕ್ಕೊರಲಿನಿಂದ ವ್ಯಕ್ತವಾದ ಅಭಿಪ್ರಾಯ ಇದು. ಗೋಷ್ಠಿಯಲ್ಲಿ ಭಾಗವಹಿಸಿದ್ದ ತೆಲುಗು, ಬಾಂಗ್ಲಾ, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಯ ಪ್ರಕಾಶಕರು ಪುಸ್ತಕ ಮಾರಾಟದ ಕುರಿತು ಆತಂಕ ವ್ಯಕ್ತಪಡಿಸಿದರು.ತೆಲುಗು ಪ್ರಕಾಶಕಿ ಗೀತಾ ರಾಮಸ್ವಾಮಿ, ‘ಪುಸ್ತಕ ಮಾರಾಟ ಕುಂಠಿತವಾಗಿದ್ದಕ್ಕೆ ಲೇಖಕರೇ ಕಾರಣ’ ಎಂದು ನೇರವಾಗಿ ದೂರಿದರು. ‘ತೆಲುಗು ಸಾಹಿತ್ಯ ಒಂದು ಕಾಲದಲ್ಲಿ ಕಮ್ಯೂನಿಸ್ಟ್‌ ಮತ್ತು ನಕ್ಸಲೈಟ್ ಚಳವಳಿಯ ಕುರಿತು ಬರೆಯುತ್ತಿತ್ತು. ಆಮೇಲೆ ಮಹಿಳಾ ಸ್ವಾತಂತ್ರ್ಯದ ಕುರಿತು ಪುಸ್ತಕಗಳು ಬಂದವು. ಅದಾದ ನಂತರ ದಲಿತ ಚಳವಳಿ ಬಂತು. ಈಗ ದಲಿತ ಚಳವಳಿ ಒಡೆದು ಇಬ್ಬಾಗ ಆಗಿದೆ. ಹೀಗಾಗಿ ಲೇಖಕರು ಬರೆಯಬೇಕಾದ್ದನ್ನು ಬರೆಯಲು ಹೆದರುತ್ತಿದ್ದಾರೆ. ಆದ್ದರಿಂದ ಒಳ್ಳೆಯ ಪುಸ್ತಕಗಳು ಬರುತ್ತಿಲ್ಲ’ ಎಂದರು. ‘ಕೇವಲ ಬೂರ್ಜ್ವಾ ಸಾಹಿತ್ಯ ಈಗ ಸೃಷ್ಟಿಯಾಗುತ್ತಿದೆ’ ಎಂದು ಗೀತಾ ಅಭಿಪ್ರಾಯಪಟ್ಟರು.‘ತೆಲುಗು ಸಿನಿಮಾಗಳು ಸಾಹಿತ್ಯವನ್ನು ಸಂಪೂರ್ಣ ಮೂಲೆಗುಂಪು ಮಾಡಿವೆ. ಬಾಹುಬಲಿಯಂಥ ಸಿನಿಮಾಗಳು ಬಂದ ನಂತರ ಪುಸ್ತಕಗಳನ್ನು ನೋಡುವವರೇ ಇಲ್ಲ. ಈಗ ಕಾದಂಬರಿಯಿಂದ ಸಿನಿಮಾ ಅನ್ನುವ ಪರಿಕಲ್ಪನೆ ಹೋಗಿ, ಸಿನಿಮಾದಿಂದ ಕಾದಂಬರಿ ಎಂಬ ಹೊಸ ಟ್ರೆಂಡು ಹುಟ್ಟಿಕೊಂಡಿದೆ. ಇದು ಅಪಾಯಕಾರಿ’ ಎಂದು ಗೀತಾ ಹೇಳಿದರು. ಇದನ್ನು ಅನುಮೋದಿಸಿದ ಪರಮಿಂದಲ್ ಸಿಂಗ್, ‘ಪಂಜಾಬಿನಲ್ಲೂ ಇದೇ ಹತಾಶೆಯ ವಾತಾವರಣ ಇದೆ’ ಎಂದರು. ‘ಪ್ರಕಾಶನ ಸಂಸ್ಥೆಗಳು ಹತಾಶೆಯ ಸ್ಥಿತಿಯಲ್ಲಿವೆ. ಎಷ್ಟೋ ಭಾಷೆಗಳಲ್ಲಿ ಲೇಖಕರಿಂದಲೇ ಹಣ ಪಡೆದು ಪುಸ್ತಕ ಪ್ರಿಂಟು ಮಾಡುತ್ತಾರೆ. ಅತ್ಯುತ್ತಮ ಪುಸ್ತಕಗಳು ಹತ್ತಿಪ್ಪತ್ತು ಪ್ರತಿ ಮಾರಾಟವಾಗುತ್ತವೆ. ಕಳಪೆ ಪುಸ್ತಕಗಳು ಸಾವಿರಾರು ಸಂಖ್ಯೆಯಲ್ಲಿ ಮಾರಾಟ ಕಾಣುತ್ತವೆ. ಈಗ ಬೇಡಿಕೆಗೆ ಅನುಗುಣವಾಗಿ ಪ್ರಿಂಟು ಮಾಡುವ ಕ್ರಮವೂ ಶುರುವಾಗಿದೆ. ಸಾವಿರ ಪ್ರತಿಗಳನ್ನು ಮುದ್ರಿಸುತ್ತಿದ್ದವರು 200-500 ಪ್ರತಿಗಳಿಗೆ ಇಳಿದಿದ್ದಾರೆ’ ಎಂದು ಬಂಗಾಳಿ ಪ್ರಕಾಶಕಿ ಇಶಾ ಚಟರ್ಜಿ ಹೇಳಿದರು.ಪುಸ್ತಕೋದ್ಯಮದ ಕುರಿತು ನೆಮ್ಮದಿ ವ್ಯಕ್ತಪಡಿಸಿದ ರವಿ ಡೀಸಿ, ‘ಮಲಯಾಳಂ ಭಾಷೆಯಲ್ಲಿ ಸಿನಿಮಾಗಳೂ ಪುಸ್ತಕಗಳೂ ಸಮಾನವಾಗಿ ಪ್ರಕಾಶಿಸುತ್ತವೆ. ಹೊಸ ಲೇಖಕರು ಬರುತ್ತಿದ್ದಾರೆ. ಎಲ್ಲವೂ ಇಂಗ್ಲಿಷಿಗೆ ಅನುವಾದ ಆಗುತ್ತಿವೆ.ಮಲಯಾಳಂ ಓದುಗರು ಇಂಗ್ಲಿಷ್ ಮತ್ತು ಮಲಯಾಳಂ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.ಮಿಕ್ಕಂತೆ ತೆಲುಗು, ತಮಿಳು, ಹಿಂದಿ, ಬಂಗಾಲಿ ಮತ್ತು ಪಂಜಾಬಿ ಪುಸ್ತಕೋದ್ಯಮ ದಿನೇದಿನೇ ಕುಸಿತ ಕಾಣುತ್ತಿದೆ ಎಂಬ ಅಭಿಪ್ರಾಯ ಒಮ್ಮತದಿಂದ ವ್ಯಕ್ತವಾಯಿತು.