ಫೇಸ್‌ಬುಕ್‌ನಲ್ಲಿ ಆಂಗ್ಲಭಾಷಾ ವ್ಯಾಮೋಹ ತೋರುವ ಪಾಲಿಕೆ ಅಧಿಕಾರಿಗಳು!

| Published : Oct 18 2024, 12:00 AM IST

ಫೇಸ್‌ಬುಕ್‌ನಲ್ಲಿ ಆಂಗ್ಲಭಾಷಾ ವ್ಯಾಮೋಹ ತೋರುವ ಪಾಲಿಕೆ ಅಧಿಕಾರಿಗಳು!
Share this Article
  • FB
  • TW
  • Linkdin
  • Email

ಸಾರಾಂಶ

ವರ್ಷದ 365 ದಿನವೂ ಕನ್ನಡ ಧ್ವಜವನ್ನು ತನ್ನ ಮೇಲೆ ಹಾರಾಡಿಸುವ ದಾವಣಗೆರೆ ಮಹಾನಗರ ಪಾಲಿಕೆಯು ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ನ ತನ್ನ ಖಾತೆಯಲ್ಲಿ ಮಾತ್ರ ಆಂಗ್ಲಭಾಷೆಯನ್ನೇ ಹೊತ್ತು ಮೆರೆಸುತ್ತಿದೆ!

ಕನ್ನಡಪ್ರಭ ವಾರ್ತೆ ದಾವಣಗೆರೆ ವರ್ಷದ 365 ದಿನವೂ ಕನ್ನಡ ಧ್ವಜವನ್ನು ತನ್ನ ಮೇಲೆ ಹಾರಾಡಿಸುವ ದಾವಣಗೆರೆ ಮಹಾನಗರ ಪಾಲಿಕೆಯು ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ನ ತನ್ನ ಖಾತೆಯಲ್ಲಿ ಮಾತ್ರ ಆಂಗ್ಲಭಾಷೆಯನ್ನೇ ಹೊತ್ತು ಮೆರೆಸುತ್ತಿದೆ!

ಹೌದು, ಸರ್ಕಾರದ ಅಧೀನದ ದಾವಣಗೆರೆ ಮಹಾನಗರ ಪಾಲಿಕೆಯ ಫೇಸ್ ಬುಕ್‌ ಖಾತೆಯಲ್ಲಿ ಅಧಿಕಾರಿಗಳಿಗೆ ಕನ್ನಡ ಭಾಷೆಯ ಅಭಿಮಾನಕ್ಕಿಂತಲೂ ಆಂಗ್ಲಭಾಷೆ ವ್ಯಾಮೋಹವೇ ಹೆಚ್ಚಾಗಿದೆ ಎಂದು ಅಸಮಾಧಾನಗಳು ಕೇಳಿಬರುತ್ತಿವೆ.

ಸ್ವಚ್ಛ ಸರ್ವೇಕ್ಷಣಾ 2024, ಸ್ವಚ್ಛ ಭಾರತ್‌, ಎಸ್ಎಚ್‌ಎಸ್‌2023, ಸ್ವಚ್ಛತಾ ಹೀ ಸೇವಾ-2024, ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ, ಸ್ವಚ್ಛ ಭಾರತ್ ಜಿಒವಿ, ದಾವಣಗೆರೆ ಜಿಪಂ, ದಾವಣಗೆರೆ ಮಹಾನಗರ ಹೀಗೆ ನಾನಾ ಇಲಾಖೆ, ಸಂಸ್ಥೆಗಳಿಗೆ ಹ್ಯಾಶ್ ಟ್ಯಾಗ್ ಮಾಡಲಾಗಿದೆ. ಕೇಂದ್ರ, ಕೇಂದ್ರದ ವಿವಿಧ ಇಲಾಖೆಗಳಿಗಷ್ಟೇ ಹ್ಯಾಶ್ ಟ್ಯಾಗ್ ಮಾಡುವ ಬಗ್ಗೆ ಕಾಳಜಿ ಕನ್ನಡ ಭಾಷೆ ಮೇಲೆ ಯಾಕಿಲ್ಲ ಎಂಬ ಪ್ರಶ್ನೆ, ಅಸಮಾಧಾನ ಜನರಿಂದ ವ್ಯಕ್ತವಾಗುತ್ತಿದೆ.

ದಾವಣಗೆರೆ ಮೇಯರ್, ಉಪ ಮೇಯರ್ ಸಹ ಕನ್ನಡದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ಅಲ್ಲದೇ, ಪಾಲಿಕೆ ಸದಸ್ಯರ ಪೈಕಿ ಬಹುತೇಕರು ಕನ್ನಡ ಪರ ಹೋರಾಟಗಾರರು, ಕನ್ನಡ ನಾಡು, ನುಡಿ ಬಗ್ಗೆ ಅಭಿಮಾನ ಹೊಂದಿದ್ದಾರೆ. ಹೀಗಿದ್ದರೂ, "ದೀಪದ ಬುಡದಲ್ಲಿ ಕತ್ತಲು " ಗಾದೆಯಂತೆ ದಾವಣಗೆರೆ ಪಾಲಿಕೆಯ ಫೇಸ್ ಬುಕ್‌ ಖಾತೆಯಲ್ಲೇ ಕನ್ನಡ ಭಾಷೆ ಕಣ್ಮರೆಯಾಗಿದ್ದನ್ನು ಮೇಯರ್, ಉಪ ಮೇಯರ್, ಇತರೆ ಸದಸ್ಯರು ಗಂಭೀರವಾಗಿ ಪರಿಗಣಿಸಬೇಕಿದೆ.

ಅಲ್ಲದೇ, ಅನ್ಯ ಊರು, ಜಿಲ್ಲೆಗಳಿಂದ ಇಲ್ಲಿಗೆ ವರ್ಗಾವಣೆ ಆಗಿ ಬಂದ ಕೆಲ ಅಧಿಕಾರಿ, ಎಂಜಿನಿಯರ್ ಗಳಿಗಂತೂ ಈ ಊರು, ಇಲ್ಲಿನ ಜನ, ಕನ್ನಡ ಭಾಷೆಯೆಂದರೆ ಒಂದು ರೀತಿ ತಾತ್ಸಾರ ಮನೋಭಾವ ತೋರುತ್ತಿರುವುದೂ ಸುಳ್ಳಲ್ಲ. ಇನ್ನಾದರೂ ಪಾಲಿಕೆ ಅಧಿಕಾರಿಗಳು, ಎಂಜಿನಿಯರ್‌ಗಳಿಗೆ ದಾವಣಗೆರೆ ಬಗ್ಗೆ, ಇಲ್ಲಿ ಬಲವಾಗಿರುವ ಕನ್ನಡ ಭಾಷೆ ಬಗೆಗಿನ ಅಭಿಮಾನವನ್ನು ತಮ್ಮ ವೃತ್ತಿಯಲ್ಲಿ ಅಳ‍ವಡಿಸಿಕೊಳ್ಳುವಂತೆ ಕಿವಿ ಹಿಂಡಿ ಹೇಳುವ ಕೆಲಸ ಮೇಯರ್, ಉಪ ಮೇಯರ್, ಸದಸ್ಯರು ಪಕ್ಷಾತೀತವಾಗಿ ಮಾಡಬೇಕಿದೆ.

ಕನ್ನಡ ಹಬ್ಬದ ನವೆಂಬರ್ ಮಾಸ ಸಮೀಪಿಸಿದೆ. ನವೆಂಬರ್‌ 1 ಬಂದಾಗ ಕನ್ನಡದ ಜಪ ಮಾಡುವ ಬದಲು, ವರ್ಷದ 365 ದಿನವೂ ತನ್ನ ಮುಕುಟದಲ್ಲಿ ಧರಿಸುವ ದಾವಣಗೆರೆ ಮಹಾನಗರ ಪಾಲಿಕೆಯೆಂಬ ಹೆಗ್ಗಳಿಕೆಗೆ ಚ್ಯುತಿ ಬಾರದಂತೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ವಿಶೇಷವಾಗಿ ಅನ್ಯ ಜಿಲ್ಲೆಗಳಿಂದ ಇಲ್ಲಿಗೆ ಬಂದು, ಆಂಗ್ಲ ಭಾಷಾ ವ್ಯಾಮೋಹ ತೋರುತ್ತಿರುವ ಆಂಗ್ಲಭಾಷೆಪ್ರಿಯ ಅಧಿಕಾರಿಗಳ ಮನಸ್ಸನ್ನು ತಿದ್ದಿತೀಡುವ ಕೆಲಸ ಪಾಲಿಕೆ ಆಡಳಿತ ಯಂತ್ರ ಮಾಡಬೇಕು. ಇಲ್ಲದಿದ್ದರೆ, ಅಂತಹ ಕೆಲಸವನ್ನು ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಧಕ್ಕೆಯಾದರೆ ಬೀದಿಗಿಳಿದು ಹೋರಾಡುತ್ತಾ ಬಂದಿರುವ ಕನ್ನಡಪರ ಸಂಘಟನೆಗಳು ಮಾಡುವ ದಿನಗಳು ದೂರವಿಲ್ಲ ಎಂಬುದು ಸುಳ್ಳಲ್ಲ.

- - - -17ಕೆಡಿವಿಜಿ19:

ಪಾಲಿಕೆ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ಕನ್ನಡ ಭಾಷೆಯೇ ಕಣ್ಮರೆಯಾಗಿದೆ.