ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಸೇವಾ ಮನೋಭಾವನೆ ಪ್ರತಿಯೊಬ್ಬರಲ್ಲಿಯೂ ಸುಪ್ತವಾಗಿ ಅಡಗಿರುವ ಸಾರ್ವಕಾಲಿಕ ಮೌಲ್ಯವಾಗಿದ್ದು, ಅದು ಇಂತಹ ಶಿಬಿರಗಳ ಮೂಲಕ ಅನಾವರಣಗೊಂಡು ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಎನ್.ಹೆಚ್. ಶಿವಶಂಕರರೆಡ್ಡಿ ತಿಳಿಸಿದರು.ತಾಲೂಕಿನ ವಿದುರಾಶ್ವತ್ಥದಲ್ಲಿ ಎನ್.ಎಸ್.ಎಸ್ ವತಿಯಿಂದ ಆಯೋಜಿಸಿದ್ದ 7 ದಿನಗಳ ಶಿಬಿರ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮುದಾಯದಲ್ಲಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡಲ್ಲಿ ಬದುಕಿಗೆ ಆಸರೆಯಾಗಲಿದೆ ಎಂದರು.
ದೇಶ ಸೇವೆ ಮಾಡಿದಂತೆಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ಇಂದಿನಿಂದಲೇ ಸೇವಾ ಮನೋಭಾವನೆ, ದೇಶಭಕ್ತಿಯ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆಯುವುದು ದೇಶದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಲಿದೆ. ಇಂತಹ ಶಿಬಿರಗಳ ಅಯೋಜನೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಶಿಬಿರಗಳನ್ನು ಆಯೋಜಿಸುವುದು ಅಥವಾ ಶಿಬಿರಕ್ಕೆ ಸಹಕರಿಸುವುದು ಪರೋಕ್ಷವಾಗಿ ದೇಶ ಸೇವೆ ಮಾಡಿದಂತೆ ಎಂದರು.
ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶ್ರೀನಿವಾಸಯ್ಯ ಮಾತನಾಡಿ, ಇಂದು ಸಮಾಜದಲ್ಲಿ ಎಲ್ಲಿ ನೋಡಿದರೂ ಸಮಾಜ ವಿರೋಧಿ ಚಟುವಟಿಕೆಗಳು ತಾಂಡವವಾಡುತ್ತಿದ್ದು, ಇಂತಹ ಶಿಬಿರಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಿ ಅವರ ಜವಾಬ್ದಾರಿಯ ಅರಿವು ಮೂಡಿಸಬೇಕಿದೆಎಂದರು.ನಾಗರಕಲ್ಲು ಪ್ರದೇಶ ಸ್ವಚ್ಛತೆ
ಶಿಬಿರದಲ್ಲಿ ಬೆಂಗಳೂರಿನ ಜೈನ್ ಮಹಾವಿದ್ಯಾಲಯದ 55 ವಿದ್ಯಾರ್ಥಿಗಳು ಮತ್ತು 4 ಸಿಬ್ಬಂದಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಐತಿಹಾಸಿಕ ಪುಣ್ಯಕ್ಷೇತ್ರವಾದ ವಿದುರಾಶ್ವತ್ಥದ ವೀರಸೌಧ, ಉದ್ಯಾನವನ ಮತ್ತು ದೇವಸ್ಥಾನದ ಸುತ್ತಮುತ್ತಲಿನ ನಾಗರಕಲ್ಲುಗಳ ಮಧ್ಯದಲ್ಲಿರುವ ತ್ಯಾಜ್ಯವನ್ನು ಸ್ವಚ್ಛಮಾಡುವ ಕಾರ್ಯವನ್ನು ಹಮ್ಮಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರು ಡಾ.ಸಿ. ನಾಗರತ್ನಮ್ಮ , ಪರಿಸರವಾದಿ ದೊಡ್ಡಕುರುಗೋಡು ಚೌಡಪ್ಪ, ಪ್ರಾಂಶುಪಾಲರಾದ ಸುದರ್ಶನ್, ಡಾ. ಕೆ.ವಿ. ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷ ನಂಜುಂಡಪ್ಪ, ಭರತ್ ರಾಜ್, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.