ಸೇವಾ ಮನೋಭಾವನೆ ಬೆಳೆಸುವ ಎನ್ನೆಸ್ಸೆಸ್‌

| Published : Jul 20 2024, 12:56 AM IST

ಸಾರಾಂಶ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಶಿಬಿರ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅವರಲ್ಲಿ ಸೇವಾ ಮನೋಭಾವನೆ ಬೆಳೆಸುತ್ತದೆ ಎಂದು ಪಿಇಟಿ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಶಿಬಿರ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅವರಲ್ಲಿ ಸೇವಾ ಮನೋಭಾವನೆ ಬೆಳೆಸುತ್ತದೆ ಎಂದು ಪಿಇಟಿ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು. ಅವರು ಶುಕ್ರವಾರ ಸ್ಥಳೀಯ ಭಂಡಾರಿ ಮತ್ತು ರಾಠಿ ಪದವಿ ಕಾಲೇಜು ತಾಲೂಕಿನ ದತ್ತು ಗ್ರಾಮವಾದ ಹಾನಾಪೂರದಲ್ಲಿ ಹಮ್ಮಿಕೊಂಡ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಅತ್ಯಂತ ಅಗತ್ಯವಾಗಿದೆ. ಗ್ರಾಮೀಣ ಬದುಕನ್ನು ತಿಳಿದುಕೊಳ್ಳುವ, ಪರಸ್ಪರ ಸಹಕಾರ, ಆರೋಗ್ಯದ ಅರಿವು, ಗ್ರಾಮೀಣ ನೈರ್ಮಲ್ಯ ಮುಂತಾದ ಗುಣಗಳನ್ನು ಎನ್ನೆಸ್ಸೆಸ್ ಬೆಳೆಸುತ್ತದೆ. ಗಾಂಧೀಜಿ ಅವರ ಗ್ರಾಮೀಣ ಅಭಿವೃದ್ಧಿಯ ಕನಸು ನನಸಾಗಲು ಎನ್ನೆಸ್ಸೆಸ್ ಸಹಕಾರಿಯಾಗಬಲ್ಲದು. ಶಿಬಿರಾರ್ಥಿಗಳು ಶಿಬಿರದಲ್ಲಿ ಗ್ರಾಮೀಣ ಬದುಕಿನ ಸಮಸ್ಯೆಗಳನ್ನು ಅರಿತು ಅವುಗಳ ನಿರ್ಮೂಲನೆಗೆ ಸಹಕರಿಸುವ ಮತ್ತು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ಕಾಲೇಜಿನ ಪ್ರಾಚಾರ್ಯ ಎನ್.ವೈ.ಬಡನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ನೆಸ್ಸಸ್ ವಾರ್ಷಿಕ ವಿಶೇಷ ಶಿಬಿರವು ಯಶಸ್ವಿಯಾಗಲೆಂದು ಹಾರೈಸಿ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪುರುಷೋತ್ತಮ್ ಝಂವರ್ ಹಾಗೂ ಪದವಿಪೂರ್ವ ವಿಭಾಗದ ಚೇರ್ಮನ್ ಸಿದ್ದಲಿಂಗಪ್ಪ ಬರಗುಂಡಿ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು. ಸಮಾರಂಭದಲ್ಲಿ ಹಾನಾಪೂರ ಗ್ರಾಪಂ ಪಿಡಿಒ ಸುನೀತಾ ಅಂಕೋಲಿ, ಗ್ರಾಪಂ ಅಧ್ಯಕ್ಷ ಜಗದೀಶ ಹಿರೇಗೌಡರ, ಗ್ರಾಪಂ ಸದಸ್ಯರು, ಕಾರ್ಯಕ್ರಮಾಧಿಕಾರಿಗಳಾದ ಡಾ. ಮಂಜಣ್ಣ, ಡಾ. ನಾಗೇಂದ್ರ ಸ್ವಾಮಿ, ಮಹಾವಿದ್ಯಾಲಯದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.