- ಗುತ್ತೂರಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹರಿಹರ

ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಗುಣಮಟ್ಟದ ಶಿಕ್ಷಣ ಸಿಗುವ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ನಿಮ್ಮ ಮಕ್ಕಳನ್ನು ದಾಖಲಿಸಿ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ತಾಲೂಕಿನ ಗುತ್ತೂರು ಗ್ರಾಮದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ನುರಿತ ಹಾಗೂ ಅನುಭವಿ ಶಿಕ್ಷಕರಿರುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅಲ್ಲದೇ ಎಲ್ಲ ನುರಿತ ಶಿಕ್ಷಕರು ಇಲ್ಲಿ ಪಾಠಗಳನ್ನು ಕಲಿಸುತ್ತಾರೆ. ಪೊಷಕರು ಸರ್ಕಾರಿ ಶಾಲೆಗಳಗೆ ಮಕ್ಕಳನ್ನು ಸೇರಿಸಿ ಎಂದು ಹೇಳಿದರು.


ಸರ್ಕಾರಿ ಶಾಲೆಗಳಲ್ಲಿ ಸರ್ಕಾರವು ಪಠ್ಯಪುಸ್ತಕ ಸೇರಿದಂತೆ ಶೈಕ್ಷಣಿಕ ಸಲಕರಣೆಗಳನ್ನು ಉಚಿತವಾಗಿ ನೀಡುವುದಲ್ಲದೇ ಮಧ್ಯಾಹ್ನದ ಬಿಸಿಯೂಟ ಸಹ ನೀಡಲಾಗುತ್ತದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಇಒ ಡಿ.ದುರುಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರಣ್ಣ ಹಾಗೂ ಇತರರಿದ್ದರು. ಹರಿಹರ ತಾಲೂಕಿನ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಿಗೆ ಉಚಿತ ಹಾಗೂ ಅನುದಾನರಹಿತ ಶಾಲೆಗಳಿಗೆ (ಮಾರಾಟಕ್ಕಾಗಿ) ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಒಂದು ಜೊತೆ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ.

ಶಾಲೆ ಪ್ರಾರಂಭೋತ್ಸವ ಮೊದಲ ದಿನವಾಗಿದ್ದರಿಂದ ಬಹುತೇಕ ಎಲ್ಲ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸಿಬ್ಬಂದಿ ಜತೆ ವಿದ್ಯಾರ್ಥಿಗಳು ಸಿಹಿಯೂಟ ಸವಿದರು. ಜೂನ್ ತಿಂಗಳ ಮೊದಲ ವಾರದಲ್ಲಿ ವಿಶೇಷ ದಾಖಲಾತಿ ಆಂದೋಲನವನ್ನು ಜಾಥಾ, ಪ್ರಭಾತ್ ಪೇರಿ, ಮನೆ ಮನೆ ಭೇಟಿ ಮಾಡುವುದರ ಮೂಲಕ ಎಲ್ಲ ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

- - - -01ಎಚ್‌ಆರ್‌ಆರ್03:

ಗುತ್ತೂರಿನ ಸರ್ಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು.