ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನೊಳಗೊಂಡು ದಾಖಲಾತಿ ಜಾಗೃತಿ ಅಭಿಯಾನ ನಡೆಸಿದರು.

ಹಾನಗಲ್ಲ: ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನೊಳಗೊಂಡು ದಾಖಲಾತಿ ಜಾಗೃತಿ ಅಭಿಯಾನ ನಡೆಸಿದರು.ಗ್ರಾಮದ ಬೀದಿ ಬೀದಿಗಳಲ್ಲಿ ದಾಖಲಾತಿ ಜಾಗೃತಿಯ ಘೋಷಣೆಗಳನ್ನು ಹೇಳುತ್ತ, ಜಾಗೃತಿ ಹಾಡುಗಳನ್ನು ಹಾಡುತ್ತ, ಪ್ರತಿ ಮನೆಯಲ್ಲಿನ ಶಾಲೆಗೆ ದಾಖಲಾಗುವ ಮಕ್ಕಳನ್ನು ಗುರುತಿಸಿ, ಶಾಲೆಗೆ ಕಳಿಸಿ ದಾಖಲಾತಿ ಮಾಡಿಡುವಂತೆ ಮನವಿಯನ್ನೂ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿದ್ದು ಗೌರಣ್ಣನವರ, ಪ್ರತಿ ಮಗು ಶಿಕ್ಷಣವಂತರಾಗಬೇಕು. ಯಾವುದೇ ಮಗು ಶಾಲಾ ದಾಖಲಾತಿಯಿಂದ ಹೊರಗುಳಿಯಬಾರದು. ದುಡಿಮೆಗಾಗಿ ವಲಸೆ ಹೋಗುವ ಮಗುವೂ ಕೂಡ ಪಾಲಕರ ಆಶಯದಂತೆ ಸರಿಯಾದ ಶಾಲೆಯಲ್ಲಿ ದಾಖಲಾತಿ ಪಡೆಯಬೇಕು. ಶಾಲೆಗೆ ಹೋಗದೇ ಇದ್ದರೆ ಮಗು ಕೇವಲ ಕೂಲಿ ಕೆಲಸಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಮಕ್ಕಳು ಶಾಲೆಗೆ ಹೋಗದೇ ಇದ್ದರೆ ಅದು ನಮ್ಮೆಲ್ಲರ ಹಿನ್ನಡೆ ಎಂದರು.ಮುಖ್ಯೋಪಾಧ್ಯಾಯ ವಾಯ್.ಡಿ. ಹೊಸಮನಿ ಮಾತನಾಡಿ, ಈಗ ನಮ್ಮ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾಗಿದೆ. ಇದರೊಂದಿಗೆ ದ್ವಿಭಾಷಾ ತರಗತಿಗಳು ಕೂಡ ಆರಂಭವಾಗುತ್ತಿವೆ. ಪಾಲಕರು ವಿಶೇಷ ಕಾಳಜಿವಹಿಸಿ ಮಕ್ಕಳನ್ನು ದಾಖಲು ಮಾಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವಿದ್ಯಾ ಡಂಬಳಪ್ಪನವರ, ಉಪಾಧ್ಯಕ್ಷರಾದ ಗಿರೀಶ ತಾವರಿ, ಮಲ್ಲೇಶ ಜಾವೋಜಿ, ಶಿವಯೋಗಿ ಸಂಗೂರ, ಚನ್ನವೀರಪ್ಪ ಅಂಗಡಿ, ರಮೇಶ ಹಳ್ಳದ, ಪ್ರಿಯಾಂಕಾ ನಿಗಟೆ, ಶಂಕ್ರಮ್ಮ ಕಲಗೌಡರ, ಸುಶೀಲಾ ಹಳ್ಳದ, ಶಿಕ್ಷಕರಾದ ಸುಭಾಸ ಹೊಸಮನಿ, ಬಸವರಾಜ ಕರೆಪ್ಯಾಟಿ, ಶಿಲ್ಪಾ ನಂದೀಕೋಲ್, ಗಂಗಮ್ಮ ನಾಗನೂರ, ರಾಜಶ್ರೀ ದಶಾವಂತರ, ಸುಸ್ಮಿತಾ ಹೀರೂರ, ಸುನಿತಾ ಲೇಖಿ, ನಯನಾ ಕಲಗೌಡರ, ಗೀತಾ ತವರಿ ಇದ್ದರು.