ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಕಾರ್ಯ ನಡೆಯುತ್ತಿದ್ದು, ಈಗಾಗಲೇ ಶೇ. 100ರಷ್ಟು ಗಣತಿ ನಮೂನೆ ವಿತರಿಸಲಾಗಿದೆ. ಗಣತಿ ನಮೂನೆ ಡಿಜಿಟಲೀಕರಣ ಕಾರ್ಯ ನಡೆಯುತ್ತಿದ್ದು, ಇದರಲ್ಲಿ ಸಹ ಶೇ. 100ರಷ್ಟು ಪ್ರಗತಿ ಸಾಧಿಸಲು ಎಲ್ಲರೂ ಕೈಜೋಡಿಸಲು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಆ. 8ರ ವರೆಗೂ ಕಾಲಾವಕಾಶ ನೀಡಿದೆ. ಆ ದಿಸೆಯಲ್ಲಿ ಈ ಅವಕಾಶವನ್ನು ಅರ್ಹ ಮತದಾರರು ಬಳಸಿಕೊಳ್ಳುವಂತಾಗಬೇಕು. ಯಾರೂ ಸಹ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಿಂದ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದರು. ಗಣತಿ ನಮೂನೆ ವಿತರಣಾ ಕಾರ್ಯ ಪೂರ್ಣಗೊಂಡಿದೆ. ಆದರೂ ನಮೂನೆ ಪಡೆಯುವುದು ಬಿಟ್ಟು ಹೋಗಿದ್ದರೆ ಪಡೆಯುವಂತಾಗಬೇಕು ಮತ್ತು ಬಿಎಲ್‍ಒಗಳು ಮಾಹಿತಿ ನೀಡಿ ಸಂಪೂರ್ಣ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಸಹ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 552 ಮತಗಟ್ಟೆಗಳಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಯನ್ನು ಮತದಾರರಿಗೆ ವಿತರಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಪ್ರಮುಖರು ಸಹ ಗಮನಿಸಬೇಕು. ನಂತರ ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಸಂಗ್ರಹಣೆ ಮಾಡಿ ಬಿಎಲ್‍ಒ ಆ್ಯಪ್‍ನಲ್ಲಿ ಡಿಜಿಟಲೀಕರಣ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಡಿಜಿಟಲೀಕರಣ ಶೇ.65 ಪ್ರಗತಿ: ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರದಿಂದ 4,68,657 ಮತದಾರರು ಇದ್ದು, ಈಗಾಗಲೇ ಎಲ್ಲ ಮತದಾರರಿಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಗಣತಿ ನಮೂನೆಯನ್ನು ವಿತರಿಸಲಾಗಿದೆ. ಈಗಾಗಲೇ 3,04,805 ಮತದಾರರ ಗಣತಿ ನಮೂನೆ ಡಿಜಿಟಲೀಕರಣವಾಗಿ ಶೇ. 65.65 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಸಂಬಂಧಿಸಿದಂತೆ 2002ರ ಮತದಾರರ ಮತಗಟ್ಟೆಯ ಭಾಗ ಸಂಖ್ಯೆ ಮತ್ತಿತರ ಮಾಹಿತಿ ಬಗ್ಗೆ ಗೊಂದಲ ಮಾಡಿಕೊಳ್ಳದೆ, ಆಯಾ ಮತಗಟ್ಟೆ ಪ್ರದೇಶದಿಂದ ಮಾಹಿತಿ ಪಡೆದುಕೊಂಡು ಭರ್ತಿ ಮಾಡಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್. ಹಾದಿಮನಿ ಮಾತನಾಡಿ, ಗಣತಿ ನಮೂನೆ ವಿತರಣಾ ಕಾರ್ಯವು ಶೇ.100ರಷ್ಟು ಆಗಿದೆ. ಆ ನಿಟ್ಟಿನಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ ಎಂಗಪು,ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 275 ಮತಗಟ್ಟೆಗಳಿದ್ದು, 2,38,447 ಮತದಾರರಿಗೆ ಗಣತಿ ನಮೂನೆಯನ್ನು ವಿತರಿಸಲಾಗಿದೆ. ಇವರಲ್ಲಿ 1,51,768 ಮಂದಿಯ ಗಣತಿ ನಮೂನೆಯ ಡಿಜಿಟಲೀಕರಣ ಮಾಡಲಾಗಿದ್ದು, ಶೇ. 63ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು. ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 277 ಮತಗಟ್ಟೆಗಳಿದ್ದು, 2,30,210 ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಇವರಲ್ಲಿ 1,54,323 ಮತದಾರರ ಗಣತಿ ನಮೂನೆ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಪ್ರಮುಖರಾದ ಸಜಿಲ್ ಕೃಷ್ಣ ಹಾಗೂ ಜಾತ್ಯತೀತ ಜನತಾ ದಳದ ಪ್ರಮುಖರಾದ ಗುಲಾಬಿ ಜನಾರ್ದನ ಅವರು ಎಸ್ ಐಆರ್ ಸಂಬಂಧ ಎಲ್ಲೆಡೆ ತಮ್ಮ ಹಂತದಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಮತದಾರರ ಪಟ್ಟಿಯಿಂದ ಅರ್ಹರು ಬಿಟ್ಟು ಹೋಗದಂತೆ ಗಮನಹರಿಸಲಾಗಿದೆ ಎಂದರು. ಚುನಾವಣಾ ಶಿರಸ್ತೆದಾರ್ ಮಹೇಶ್, ಅನಿಲ್ ಕುಮಾರ್ ಇತರರು ಇದ್ದರು.
