ಶಿರಹಟ್ಟಿ: ಬೇಸಿಗೆಯಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಸಿಗೆ ದಿನಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾದಾಗ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚುತ್ತದೆ. ಆದ್ದರಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಹಾಳಾದ ಪೈಪ್‌ಲೈನ್‌ಗಳನ್ನು ತಕ್ಷಣ ದುರಸ್ತಿ ಮಾಡುವುದು ಮುಖ್ಯ. ಜನರು ನೀರನ್ನು ವ್ಯರ್ಥ ಮಾಡದಂತೆ ಜಾಗೃತಿ ಮೂಡಿಸಬೇಕು ಎಂದರು.೨೦೨೬ನೇ ಸಾಲಿನ ಬೇಸಿಗೆಯಲ್ಲಿ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಅವಶ್ಯವಿರುವ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯಗಳ ಬರ ಪರಿಹಾರ ನಿಧಿ ಹಾಗೂ ಇಲಾಖೆಯ ಟಾಸ್ಕ್‌ಫೋರ್ಸ್ ಅಡಿ ಸಂಯೋಜಿತಗೊಳಿಸಿ ಬಳಸಿಕೊಂಡು ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲು ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿಗಳು ಸಮನ್ವಯದೊಂದಿಗೆ ಕ್ರಮ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಕಡಿಮೆಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಮತ್ತು ಬೆಸಿಗೆಯ ತಾಪಮಾನ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಶಿರಹಟ್ಟಿ ಪಟ್ಟಣದ ೧೮ ವಾರ್ಡುಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮುಂದಿನ ಮೂರು ತಿಂಗಳು ನೀರಿನ ಕೊರತೆ ಉಂಟಾಗುವುದನ್ನು ಅಧಿಕಾರಿಗಳು ಗುರುತಿಸಲು ಮುಂದಾಗಬೇಕು ಎಂದರು.
ಮೇವು ಸಂಗ್ರಹಣೆ ಮಾಡಿ: ತಾಲೂಕಿನಲ್ಲಿ ಇದೀಗ ಎಷ್ಟು ಟನ್ ಮೇವು ಲಭ್ಯವಿದೆ, ಮುಂದಿನ ೨೦-೨೫ ವಾರದವರೆಗೆ ಈಗಿರುವ ಮೇವು ಜಾನುವಾರುಗಳಿಗೆ ಸಾಕಾಗುವುದೆ ಎಂಬ ಸ್ಪಷ್ಟ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳು ನೀಡಬೇಕು. ಒಂದು ವೇಳೆ ಮೇವು ಕೊರತೆ ಉಂಟಾಗುವ ಸಾಧ್ಯತೆ ಇದ್ದರೆ, ಹೆಚ್ಚಿನ ಪ್ರಮಾಣದಲ್ಲಿ ಮೇವು ಹೊಂದಿರುವ ರೈತರನ್ನು ಸಂಪರ್ಕಿಸಿ ಅವರಿಂದ ಉಚಿತವಾಗಿ ಮೇವು ಪಡೆಯಲು ಅಧಿಕಾರಿಗಳು ಮುಂದಾಗಬೇಕು. ರೈತರಿಂದ ದಾನವಾಗಿ ಪಡೆದಿರುವ ಮೇವನ್ನು ಸರ್ಕಾರದ ಮೇವು ಸಂಗ್ರಹಣ ಘಟಕ ಆರಂಭವಾಗುವ ವರೆಗೆ ರೈತರಲ್ಲಿಯೇ ಸಂಗ್ರಹಿಸಿಡಲು ಕ್ರಮ ಕೈಗೊಳ್ಳಬೇಕು ಎಂದರು.ಈ ವೇಳೆ ತಾಪಂ ಇಒ ರಾಮಪ್ಪ ದೊಡ್ಡಮನಿ, ಗ್ರೇಡ್ ೨ ತಹಸೀಲ್ದಾರ ವಿ.ಎ. ಮುಳಗುಂದಮಠ, ಮಲ್ಲಿಕಾರ್ಜುನ ಪಾಟೀಲ, ಸಂತೋಷ ಅಸ್ಕಿ, ವಿನೋದ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಎಲ್‌ಪಿಜಿ ಗ್ಯಾಸ್: ಭಯಪಡುವ ಅಗತ್ಯವಿಲ್ಲದೇಶದ ಹಲವು ಕಡೆ ಎಲ್‌ಪಿಜಿ ಗ್ಯಾಸ್ ಅಭಾವ ಹೆಚ್ಚಾಗುತ್ತಿದ್ದು, ಅದು ನಮ್ಮಲ್ಲಿಯೂ ಸಂಭವಿಸಬಹುದು ಎಂದು ತಾಲೂಕಿನ ಜನರು ಭಯಪಡುವ ಅಗತ್ಯವಿಲ್ಲ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು. ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್‌ಪಿಜಿ ಏಜೆನ್ಸಿ ಅವರೊಂದಿಗೆ ಮಾಹಿತಿ ಪಡೆಯಲಾಗಿದ್ದು, ನಿತ್ಯ ಒಂದು ಲೋಡ್ ಎಲ್‌ಪಿಜಿ ಶಿರಹಟ್ಟಿಗೆ ಬರುತ್ತಿದ್ದು, ಯಾರು ಭಯಭೀತರಾಗುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ.ಆದರೆ ಏಜೆನ್ಸಿಯವರ ಮಾಹಿತಿಯಂತೆ ಸಾರ್ವಜನಿಕರು ಮುಂದಿನ ೧೦ರಿಂದ ೧೫ ದಿನಗಳಿಗೆ ಆಗುವಷ್ಟು ಗ್ಯಾಸ್ ಮನೆಯಲ್ಲಿದ್ದರೂ ಮುಂಗಡ ಬುಕ್ಕಿಂಗ್ ಮಡುತ್ತಿರುವುದಾಗಿ ತಿಳಿಸಿದ್ದಾರೆ. ಈ ರೀತಿ ಜನರು ಎಲ್‌ಪಿಜಿ ಗ್ಯಾಸ್‌ಗೆ ಸಂಬಂಧಿಸಿದಂತೆ ಭಯಭೀತರಾಗುವ ಅಗತ್ಯತೆಯಿಲ್ಲ. ಸಾರ್ವಜಿನಿಕರಿಗೆ ಪೂರೈಸಲು ಗ್ಯಾಸ್ ಲಭ್ಯವಿದೆ ಎಂದರು.