ಕೊಪ್ಪಳ ನಗರದ ಜಿಪಂ ಜೆ.ಎಚ್. ಪಟೇಲ ಸಭಾಂಗಣದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನಾ ಸಭೆ ನಡೆಯಿತು.
ಕೊಪ್ಪಳ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಮರ್ಪಕ ಯೋಜನೆ ರೂಪಿಸುವಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಪಂ ಜೆ.ಎಚ್. ಪಟೇಲ ಸಭಾಂಗಣದಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇಷ್ಟು ವಾರಗಳ ಕಾಲ ಮೇವು ಸಮಸ್ಯೆಯಾಗುವುದಿಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದೀರಿ? ಕೇವಲ ಹೇಳಿಕೆ ನೀಡಿದರೆ ಸಾಲದು. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸುವಂತೆ ಸೂಚಿಸಿದ ಅವರು, ಹಾಲು ಒಕ್ಕೂಟವೂ ಈ ಕಾರ್ಯದಲ್ಲಿ ಕೈಜೋಡಿಸಬೇಕು. ಜಿಲ್ಲೆಯಲ್ಲಿ ಸುಮಾರು 1.20 ಲಕ್ಷ ಬೋರ್‌ವೆಲ್‌ಗಳಿದ್ದು, ಅವಲಂಬಿತ ರೈತರಿಗೆ ಮೇವಿನ ಬೀಜದ ಕಿಟ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬಳ್ಳಾರಿ ಹಾಲು ಒಕ್ಕೂಟದಿಂದ ಹೆಚ್ಚಿನ ಪ್ರಮಾಣದಲ್ಲಿ ಮೇವಿನ ಬೀಜದ ಕಿಟ್‌ಗಳನ್ನು ನೀಡುವಂತೆ ವೇದಿಕೆಯಲ್ಲಿದ್ದ ರಾಬಕೊವಿ ಅಧ್ಯಕ್ಷ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರಿಗೆ ಸೂಚಿಸಿದರು. ಮಧ್ಯ ಪ್ರವೇಶಿಸಿದ ಸಚಿವ ಶಿವರಾಜ ತಂಗಡಗಿ, ಬೀಜದ ಕಿಟ್ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗೋಶಾಲೆ ತೆರೆಯುವುದಕ್ಕಿಂತ ಅಗತ್ಯವಿರುವ ಕಡೆ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸುವುದು ಸೂಕ್ತ ಎಂದು ಡಿಸಿಎಂ ಪರಮೇಶ್ವರ ಸಲಹೆ ನೀಡಿದರು.ರಾಜ್ಯದಲ್ಲಿ ವಿಬಿ ಜಿ ರಾಮ್ ಜಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಜನರು ಗುಳೆ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ವಾರಕ್ಕೊಮ್ಮೆ ಕೂಲಿ ಪಾವತಿಸುವಂತೆ ಡಿಸಿಎಂ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ₹21 ಕೋಟಿ ಕೂಲಿ ಪಾವತಿ ಬಾಕಿ ಇದೆ ಎಂದು ಜಿಪಂ ಸಿಇಒ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ವಾರದೊಳಗೆ ಕೂಲಿ ಪಾವತಿಸಬೇಕು. ಹಣದ ಸಮಸ್ಯೆ ಇದ್ದರೆ ನನಗೆ ತಿಳಿಸಿ, ಹಣ ಕೊಡಿಸುತ್ತೇನೆ. ಆದರೆ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ನೀಡದೆ ಇರಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದು ಖಡಕ್ ಸೂಚನೆ ನೀಡಿದರು.ಬೆಳೆ ವಿಮೆ ಪರಿಹಾರ ವಿಳಂಬಕ್ಕೆ ಅಸಮಾಧಾನ: ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿನ ವಿಳಂಬದ ಬಗ್ಗೆಯೂ ಡಿಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಈ ಬಾರಿ 1.56 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, ಕಳೆದ ವರ್ಷ 60 ಸಾವಿರ ರೈತರು ನೋಂದಾಯಿಸಿಕೊಂಡಿದ್ದರು. ಕಳೆದ ವರ್ಷ ₹60 ಕೋಟಿ ಪರಿಹಾರ ನೀಡಲಾಗಿದ್ದು, ಈ ಬಾರಿ ಪರಿಹಾರ ಯಾವಾಗ ನೀಡಲಾಗುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಹಗಲು ವೇಳೆ ವಿದ್ಯುತ್ ಪೂರೈಕೆಗೆ ಸೂಚನೆ: ಮಳೆ ಕೊರತೆಯಿಂದ ಬೆಳೆಗಳಿಗೆ ನೀರುಣಿಸಲು ರೈತರಿಗೆ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಸುವಂತೆ ಸಭೆಯಲ್ಲಿ ಒತ್ತಾಯ ಕೇಳಿಬಂತು. ಸಚಿವ ಶಿವರಾಜ ತಂಗಡಗಿ ಮಾತನಾಡಿ, ಮಧ್ಯರಾತ್ರಿ ವಿದ್ಯುತ್ ಪೂರೈಕೆಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಹಗಲು ವೇಳೆಯಲ್ಲಿ ವಿದ್ಯುತ್ ನೀಡುವಂತೆ ಸೂಚಿಸಿದರು. ಬೆಳಗ್ಗೆ 4ರಿಂದ 11ರ ವರೆಗೆ ವಿದ್ಯುತ್ ಪೂರೈಸುವ ಕುರಿತು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಆರು ಗಂಟೆ ಪೂರೈಕೆಯಾಗುತ್ತಿದ್ದು, ಅದನ್ನು ಏಳು ಗಂಟೆಗೆ ಹೆಚ್ಚಿಸಬೇಕು ಎಂದರು.ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಕೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಶಾಸಕ ದೊಡ್ಡನಗೌಡ ಪಾಟೀಲ ಸಮಸ್ಯೆ ವಿವರಿಸಿದರು. ಇದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿಎಂ, ಟಿಸಿ ಕೆಟ್ಟ ತಕ್ಷಣ ಅಳವಡಿಸದೆ 24 ಗಂಟೆಯಲ್ಲಿ ಕೊಡುತ್ತೇವೆ ಎಂದು ಹೇಳುವುದೇಕೆ? 24 ಗಂಟೆಯಲ್ಲಿ ಕೊಡದಿದ್ದರೆ ನಿಮ್ಮನ್ನು ಅಮಾನತು ಮಾಡಬೇಕಾ? ಟಿಸಿ ಅಳವಡಿಸಲು ಹಣ ಕೇಳುವ ಪರಿಸ್ಥಿತಿ ಇರಬಾರದು. ಇನ್ನು ಮುಂದೆ ಹೀಗೆ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ರೈತರಿಗೆ ₹2,500 ಪರಿಹಾರವನ್ನು ನಾಳೆಯಿಂದ ವಿತರಿಸುವುದಾಗಿ ಡಿಸಿಎಂ ತಿಳಿಸಿದರು.ಅಟಲ್ ಜನಸ್ನೇಹಿ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎಸ್. ದಿವಾಕರ, ಜಿಪಂ ಸಿಇಒ ಕೊಪ್ಪಳದ ವರ್ಣಿತ್ ನೇಗಿ, ರಾಯಚೂರಿನ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ರಾಯಚೂರು ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್, ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ರಾಯಚೂರು ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಜಂಟಿ ತೋಟಗಾರಿಕಾ ನಿರ್ದೇಶಕ ಕೃಷ್ಣ ಉಕ್ಕುಂದ, ರಾಯಚೂರು ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ, ತೋಟಗಾರಿಕಾ ಜಂಟಿ ನಿರ್ದೇಶಕ ಮಹಮ್ಮದ್ ಅಲಿ ಇದ್ದರು.
ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆಯಾಗಿದ್ದ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಹಗಲು ವೇಳೆಯಲ್ಲಿ ಹಾಗೂ ದಿನ 7 ಗಂಟೆ ನೀಡುವಂತೆ ಕೋರಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.