ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬೇಕಾದರೆ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಯಲ್ಲಿ ಕೇವಲ ಲಿಂಗಾಯತ ಎಂದೇ ನಮೂದಿಸುವಂತೆ ಡಂಬಳ-ಗದಗ ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಕರೆ ನೀಡಿದರು.ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ಭಾಗವಾಗಿ ಬುಧವಾರ ನವನಗರದ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ವಚನ ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಬಸವಣ್ಣ, ಲಿಂಗಾಯತ ಎಂದೆಲ್ಲ ಹೇಳುತ್ತೇವೆ. ಆದರೆ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಸೇರಿಸುವ ಬಗ್ಗೆ ಯಾಕೆ ಯಾರೂ ಧ್ವನಿ ಎತ್ತುತ್ತಿಲ್ಲ ಎಂಬ ಮುಧೋಳದ ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಸ್ವಾಮೀಜಿಗಳು ಸತತ ಪ್ರಯತ್ನ ಮಾಡುತ್ತಿದ್ದೇವೆ. ಜನಗಣತಿ ಸಂದರ್ಭದಲ್ಲಿ ಲಿಂಗಾಯತ ಎಂದೇ ಬರೆಯಿಸಿ ಅದಕ್ಕೆ ಜಾತಿ, ಉಪಜಾತಿ ಬೇಡ. ಪ್ರತಿಯೊಬ್ಬರು ಗಟ್ಟಿಯಾಗಿ ಇದನ್ನು ಮಾಡಿದಾಗ ಸ್ವತಂತ್ರ ಧರ್ಮದ ಮಾನ್ಯತೆ ಸಿಗುತ್ತದೆ. ಮುಂದೆ ಸೌಲಭ್ಯ ಪಡೆಯುವುದಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.ವೀರಶೈವಕ್ಕೆ ನಮ್ಮ ವಿರೋಧವಿಲ್ಲ. ಲಿಂಗಾಯತ ಎಂದು ಬರೆಯಿಸಿ ಮುಂದೆ ಉಪಪಂಗಡದಲ್ಲಿ ವೀರಶೈವ ಎಂದು ಬರೆಯಬಹುದು ಎಂದು ಹೇಳಿದರು.
ಸಂವಾದದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಪ್ರಶ್ನೆಗಳ ಸುರಿಮಳೆಗೈದರು. ಲಿಂಗಾಯತ ಧರ್ಮ ಒಂದೇ ಎನ್ನುತ್ತೀರಿ ಎಷ್ಟು ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ್ದೀರಿ, ಎಷ್ಟು ದಲಿತರ ಮನೆಗಳಲ್ಲಿ ಊಟ ಮಾಡಿದ್ದೀರಿ, ಎಲ್ಲರೂ ಸಮಾನ ಎನ್ನುವವರು ಶರಣೆಯರನ್ನು ಹಿಂದಿನ ಸಾಲಿನಲ್ಲಿ ಕೂಡಿಸಿದ್ದೀರಿ, ಲಿಂಗದ ಮಹತ್ವವೇನು ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದರು.ಇದಕ್ಕೆ ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು, ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಬಾಗಲಕೋಟೆಯ ಚರಂತಿಮಠದ ಡಾ.ಪ್ರಭುಸ್ವಾಮೀಜಿ, ಇಳಕಲ್ಲಿನ ಶ್ರೀಗುರುಮಹಾಂತ ಸ್ವಾಮೀಜಿ ಉತ್ತರಿಸಿದರು.
ಕೆಟ್ಟದೃಷ್ಟಿಯನ್ನು ಹೀರುವ ಸ್ವಭಾವ ಕಣ್ಣಿಗೆ ಹಚ್ಚುವಕಾಡಿಗೆಗೆ ಇದೆ. ಇದೇ ಕಾಡಿಗೆ ಬಳಸಿ ಅದಕ್ಕೊಂದು ಜಾಗತಿಕ ರೂಪವಾಗಿ ಲಿಂಗವನ್ನು ಬಸವಣ್ಣನವರು ಸೃಷ್ಟಿಸಿದರು. ಮನಸಿನಲ್ಲಿ ಕೆಟ್ಟ ಚಿಂತನೆಗಳನ್ನು ಅದು ದೂರಗೊಳಿಸುತ್ತದೆ. ಬಸವಣ್ಣನವರು ಮಹಾನ್ ಆಯುರ್ವೇದ ತಜ್ಞರಾಗಿದ್ದರು. ಲಿಂಗ ಪೂಜೆಯಲ್ಲಿ ವೈಜ್ಞಾನಿಕ ಕಾರಣಗಳೂ ಇವೆ ಎಂದು ಇಳಕಲ್ಲ ಶ್ರೀಗುರು ಮಹಾಂತ ಸ್ವಾಮೀಜಿ ಹೇಳಿದರು.ಡಾ.ಪ್ರಭುಸ್ವಾಮೀಜಿ ಮಾತನಾಡಿ, ಸವದತ್ತಿಯಲ್ಲಿ ದೇವದಾಸಿ ಮಹಿಳೆಯರು ಬಳೆ ಒಡೆದುಕೊಳ್ಳುವ ಸಂಪ್ರದಾಯವಿತ್ತು. ಸರ್ಕಾರದ ವಿವಿಧ ಇಲಾಖೆಗಳು ಕೋರಿದಾಗ ಅವರನ್ನು ಸೇರಿಸಿ ಆ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲಾಯಿತು. ಬಳೆ ತೊಡುವಂತೆ ಮನವರಿಕೆ ಮಾಡಿಕೊಡಲಾಯಿತು. ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ವಿಧವೆಯ ಮದುವೆ ಮಾಡಿಸಲಾಗಿತ್ತು. ಮಹಿಳೆಯರು ಬದಲಾದರೆ ಅನೇಕ ಮೂಢನಂಬಿಕೆಗಳನ್ನು ದೂರಗೊಳಿಸಬಹುದು ಎಂದು ಹೇಳಿದರು.
ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ನಾವು ಅನೇಕ ಅಂತರ್ಜಾತಿ ವಿವಾಹ ಮಾಡಿಸಿದ್ದೇವೆ. ದಲಿತರ ಮನೆಗಳಿಗೆ ಊಟಕ್ಕೂ ತೆರಳಿದ್ದೇವೆ. ಜಿಲ್ಲೆಗೊಬ್ಬ ಉಸ್ತುವಾರಿ ಮಂತ್ರಿಗಳು ಇರುವಂತೆ ವಿವಿಧ ಸಮುದಾಯ ಪ್ರತಿನಿಧಿಸುವ ಮಠಾಧೀಶರು ಆಯಾ ಸಮುದಾಯದ ಉಸ್ತುವಾರಿಗಳು. ಆದರೆ ಸಕಲ ಲಿಂಗಾಯತರಿಗೂ ಅವರು ಸ್ವಾಮೀಜಿಗಳಾಗಿರುತ್ತಾರೆ ಎಂದು ಹೇಳಿದರು.ಮೂರ್ತಿ ಪೂಜೆ ಕುರಿತು ಗೊಂದಲ: ಗೌರಮ್ಮ ಪೂಜಾರ ಎಂಬುವವರು ಗಣೇಶನನ್ನು ಕೂರಿಸಿ ಪೂಜಿಸುತ್ತಾರೆ. ಏಕತತ್ವ ನಿಷ್ಠೆ ಉಳ್ಳುವರು ಹೀಗೆ ಮಾಡಬಹುದೇ ಅದರ ಬದಲಾಗಿ ಬಸವಣ್ಣನನ್ನು ಕೂರಿಸಿ ಪೂಜಿಸಬಹುದೇ ಎಂದು ಕೇಳಿದರು. ಇದಕ್ಕೆ ಮಠಾಧೀಶರ ಉತ್ತರ ಗೊಂದಲಮಯವಾಗಿತ್ತು. ಮುಖಂಡ ಅಶೋಕ ಬರಗುಂಡಿ ಮಾತನಾಡಿ, ನಾವು ನಿರಾಕಾರ ಸ್ವರೂಪಿ ಒಪ್ಪಿದ್ದೇವೆ. ಮೂರ್ತಿ ಪೂಜಕರು ನಾವಲ್ಲ ಎಂದರು. ಭಾಲ್ಕಿ ಶ್ರೀಗಳು ಉತ್ತರಿಸಿ ಎಲ್ಲ ಧರ್ಮಕ್ಕೆ ಗುರುವಿದ್ದಂತೆ ಬಸವಣ್ಣ ನಮ್ಮ ಧರ್ಮಗುರು. ಬಸವಣ್ಣನನ್ನು ಕೂರಿಸಿ ಪುಷ್ಪಾರ್ಚನೆ ಮಾಡುವುದು ತಪ್ಪಲ್ಲ ಎಂದರು. ಇದು ಗೊಂದಲಕ್ಕೆ ಕಾರಣವಾಯಿತು.