ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆಯಲ್ಲಿ ಮಕ್ಕಳ ಉತ್ಸಾಹ

| Published : Jul 01 2024, 01:46 AM IST

ಸಾರಾಂಶ

ಶಿಕಾರಿಪುರದ ಭವಾನಿರಾವ್‌ ಕೇರಿಯಲ್ಲಿನ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲಾ ಆವರಣದಲ್ಲಿ ಶಾಲಾ ಸಂಸತ್ ರಚನಾ ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಮತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪಟ್ಟಣದ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲಾ ಆವರಣದಲ್ಲಿ ಶಾಲಾ ಸಂಸತ್ ರಚನಾ ಹಿನ್ನೆಲೆ ಚುನಾವಣಾ ಪ್ರಕ್ರಿಯೆ ನಡೆಯಿತು.

ಶಾಲೆ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಮತದಾನ ಮಾಡುವ ಮೂಲಕ ತಮ್ಮ ಸ್ನೇಹಿತರು ಕೂಡ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಏಳು ದಿನಗಳಿಂದ ಶಾಲಾ ಸಂಸತ್ ರಚನೆ ಮಾಡಿಕೊಳ್ಳಲು ಚುನಾವಣಾ ಪ್ರಕ್ರಿಯೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಧಿಸೂಚನೆ ಹೊರಡಿಸುವಿಕೆ ನಾಮಪತ್ರ ಸಲ್ಲಿಕೆ, ಹಿಂಪಡಿಯುವಿಕೆ, ಅಧಿಕೃತ ಅಭ್ಯರ್ಥಿಗಳ ಘೋಷಣೆ, ಪ್ರಚಾರ, ಮತದಾನ, ಮತ ಎಣಿಕೆ ಹೀಗೆ ಚುನಾವಣೆ ಎಲ್ಲ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆಸಲಾಯಿತು. ಶಾಲೆ ಅಭಿವೃದ್ಧಿ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ತಾವು ತಯಾರಿಸಿ ಕೊಂಡಿರುವ ಅಜೆಂಡಾ ಇತರೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಮತ ನೀಡುವಂತೆ ಮತಯಾಚಿಸಿದರು. ಶಾಲಾ ಆವರಣದಲ್ಲಿ ಸೇರಿದ್ದ ಮಕ್ಕಳು ಸಾಲುಗಟ್ಟಿ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.

10ನೇ ತರಗತಿ ವಿದ್ಯಾರ್ಥಿ ಶ್ರೇಯಸ್.ಎಸ್.ಆರ್ ಮಾತನಾಡಿ, ಚುನಾವಣೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ರಚನೆ ಮಾಡಿಕೊಳ್ಳಲು ನಡೆಯುವಂತಹ ಪ್ರಕ್ರಿಯೆ. 18 ವರ್ಷ ತುಂಬಿದ ಪ್ರತಿಯೊಬ್ಬರು ಚುನಾವಣೆಯಲ್ಲಿ ಪಾಲ್ಗೊಂಡು, ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿಟ್ಟು, ಸಮಾಜದಲ್ಲಿನ ಎಲ್ಲಾ ಜಾತಿ ವರ್ಗದ ಜನರನ್ನು ಸಮಾನವಾಗಿ ಕಾಣುವಂತಹ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

10ನೇ ತರಗತಿ ವಿದ್ಯಾರ್ಥಿನಿ ಸುಷ್ಮಾ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಜನರು ಮತ ಚಲಾಯಿಸುತ್ತಾರೆ. ಅದೇ ರೀತಿ ನಮ್ಮಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರೊಂದಿಗೆ ಸೇರಿಕೊಂಡು ನಮ್ಮ ಶಾಲೆ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದರು. ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಭ್ರಷ್ಟಾಚಾರ ಮುಕ್ತವಾಗಿ ಚುನಾವಣೆಯಾಗಬೇಕು. ಈ ನಿಟ್ಟಿನಲ್ಲಿ ನಮಗೆ ಚುನಾವಣೆ ಹೇಗೆ ನಡೆಯುತ್ತದೆ, ನಾವು ಹೇಗೆ ಮತದಾನ ಮಾಡಬೇಕು ಎಂದೆಲ್ಲಾ ಕಲಿಸಿದ್ದಾರೆ. ನಾವು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂವಿಧಾನದ ಘನತೆ ಎತ್ತಿ ಹಿಡಿಯುತ್ತೇವೆ ಎಂದು ಅಭ್ಯರ್ಥಿಗಳು ಘೋಷಿಸಿದರು.

ಶಾಲಾ ಪ್ರಾಚಾರ್ಯರು ಮತ್ತು ಚುನಾವಣಾ ಮುಖ್ಯ ಅಧಿಕಾರಿ ವಿಶ್ವನಾಥ. ಪಿ ಮಾತನಾಡಿ, ಇಲಾಖೆ ನಿಯಮದಂತೆ ಶಾಲೆಯಲ್ಲಿ ಶಾಲಾ ಸಂಸತ್ ರಚನೆ ಮಾಡಬೇಕಾಗಿದೆ. ಚುನಾವಣೆ ಏಕೆ ಮಾಡುತ್ತಾರೆ, ಹೇಗೆ ನಡೆಯುತ್ತವೆ, ಚುನಾವಣೆಯಲ್ಲಿ ಆಯ್ಕೆಯಾಗಿ ಬರುವವರು ಮಾಡಬೇಕಾಗಿರುವ ಕೆಲಸಗಳೇನು ಎನ್ನುವ ಕುರಿತು ಮಾಹಿತಿ ಹಾಗೂ ಅಗತ್ಯ ತರಬೇತಿ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ಶಿಕ್ಷಕ ಪ್ರಶಾಂತ ಕುಬಸದ, ರೇಷ್ಮಾ ಭಾನು, ಮಂಜುಳಾ ಪಾಟೀಲ್, ಲಲಿತ, ರೇಖಾ, ಚಂದ್ರಮತಿ, ನಂದಿನಿ, ಹಾಲಸ್ವಾಮಿ, ನಿಂಗಪ್ಪ, ಚಂದ್ರಶೇಖರ, ಚಂದನ್ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ವಿದ್ಯಾರ್ಥಿ ಚನ್ನವೀರಯ್ಯ ಮತ್ತು ಸ್ಕೌಟ್ಸ್ ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದರು.