ದೇವಳದ ಅತಿಕ್ರಮಿತ ಜಾಗಗಳ ಸಂಪೂರ್ಣ ದೇವಳದ ಸುಪರ್ದಿಗೆ: ಶಾಸಕ ಅಶೋಕ್ ರೈ

| Published : Mar 30 2025, 03:04 AM IST

ದೇವಳದ ಅತಿಕ್ರಮಿತ ಜಾಗಗಳ ಸಂಪೂರ್ಣ ದೇವಳದ ಸುಪರ್ದಿಗೆ: ಶಾಸಕ ಅಶೋಕ್ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿದ್ದ ಮುಖ್ಯ ರಸ್ತೆಯ ಬದಿಯಲ್ಲಿದ್ದ ಮೂರು ಅಂಗಡಿಗಳನ್ನು ಶನಿವಾರ ತೆರವು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ಮಹಾಲಿಂಗೇಶ್ವರ ದೇವಳದ ಅತಿಕ್ರಮಿತ ಜಾಗವನ್ನೂ ಪೂರ್ಣವಾಗಿ ದೇವಳದ ಸುಪರ್ದಿಗೆ ಪಡೆದುಕೊಳ್ಳಲಾಗುವುದು. ದೇವಳದ ಹೆಸರಲ್ಲಿರುವ ಸುಮಾರು 16.5 ಎಕರೆ ಜಾಗ ಬೇರೆಯವರ ಸ್ವಾಧೀನದಲ್ಲಿದೆ. ತೆಂಕಿಲ, ನೆಲ್ಲಿಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಈ ಜಾಗಗಳಿದ್ದು, ಈಗಾಗಲೇ ಅಳತೆ ಮಾಡಲು ಆದೇಶ ಮಾಡಲಾಗಿದೆ. ದೇವಳದ ಜಾಗಗಳನ್ನು ಅತಿಕ್ರಮಣ ಮಾಡಿದವರಿಗೆ ಜಾಗ ಬಿಟ್ಟುಕೊಡುವಂತೆ ಮನವಿಯನ್ನೂ ಮಾಡಲಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿದ್ದ ಮುಖ್ಯ ರಸ್ತೆಯ ಬದಿಯಲ್ಲಿದ್ದ ಮೂರು ಅಂಗಡಿಗಳನ್ನು ಶನಿವಾರ ತೆರವು ಮಾಡಲಾಯಿತು. ಈ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದೇವಳಕ್ಕೆ ಸೇರಿದ ಈ ಜಾಗಗಳನ್ನು ದೇವಳದ ಸುಪರ್ದಿಗೆ ಪಡೆದುಕೊಂಡ ಬಳಿಕ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದ ಮಾದರಿಯಲ್ಲಿ ವಸತಿಗೃಹ ನಿರ್ಮಾಣ, ವಾಣಿಜ್ಯಸಂಕೀರ್ಣ, ಛತ್ರಗಳನ್ನು ಕಟ್ಟುವ ಕೆಲಸ ನಡೆಯಲಿದೆ. ಪ್ರವಾಸಿಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದರು.ಪ್ರಸ್ತುತ ಇಲ್ಲಿ ದೇವಳದ ಎದುಭಾಗದಲ್ಲಿ ಹೆಚ್ಚಿನ ಜನಜಂಗುಳಿ ಉಂಟಾಗದಂತೆ ಮಾಡಲು ಈ ಮೂರು ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ. ಸ್ವಇಚ್ಛೆಯಿಂದ ಈ ಅಂಗಡಿಗಳನ್ನು ಹೊಂದಿದ್ದ ಮಾಲಕರು ಬಿಟ್ಟುಕೊಟ್ಟಿದ್ದಾರೆ. ಖ್ಯಾತ ವಕೀಲರಾದ ಕಿಶೋರ್ ಕೊಳತ್ತಾಯ, ಸುಬ್ರಹ್ಮಣ್ಯ ಕೊಳತ್ತಾಯ, ಮಧುರಾ ಸ್ವೀಟ್ಸ್ ಮಾಲಕರಾದ ವಿಠಲ್‌ದಾಸ್ ಹೆಗ್ಡೆ ಅವರು ಅತ್ಯಂತ ಪ್ರೀತಿಪೂರ್ವಕವಾಗಿ ಯಾವುದೇ ಫಲಾಪೇಕ್ಷೆಯೂ ಇಲ್ಲದೆ ಬಿಟ್ಟುಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಮಾತನಾಡಿ, ಇಲ್ಲಿ ತೆರವಾದ ಸ್ಥಳದಲ್ಲಿ ಈ ಬಾರಿ ಅನ್ನ ಪ್ರಸಾದ ವಿತರಣೆಯ ಕೆಲಸ ನಡೆಯಲಿದೆ. ಜಾತ್ರೆಯ ಹಿನ್ನಲೆಯಲ್ಲಿ ಮೊದಲು ಅನ್ನಪ್ರಸಾದ ವಿತರಣೆ ಮಾಡುತ್ತಿದ್ದ ಜಾಗದಲ್ಲಿ ನೂರು ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಏ.3ಕ್ಕೆ ಏಲಂ ಪ್ರಕ್ರಿಯೆ ನಡೆಯಲಿದೆ. ಒಬ್ಬ ವ್ಯಕ್ತಿಗೆ ಕೇವಲ 2 ಅಂಗಡಿಗಳು ಮಾತ್ರ ನೀಡುವ ಚಿಂತನೆ ಮಾಡಿದ್ದೇವೆ ಎಂದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪಿ.ವಿ., ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಈಶ್ವರ ಬಿಡೇಕರ್ ಹಾಗೂ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಇದ್ದರು.