ಕುಕನೂರು ಪಪಂ ಜಾಗದ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದು

| Published : Oct 31 2024, 01:00 AM IST

ಸಾರಾಂಶ

ಸ್ಥಳೀಯ ಪಪಂನ ಕಾರ್ಯಾಲಯ ಇರುವ ಜಾಗದ ಪಹಣಿಯಲ್ಲಿ ವಕ್ಫ್‌ ಆಸ್ತಿ ನಮೂದು ಆಗಿದೆ.

ಕನ್ನಡಪ್ರಭ ವಾರ್ತೆ ಕುಕನೂರು

ಸ್ಥಳೀಯ ಪಪಂನ ಕಾರ್ಯಾಲಯ ಇರುವ ಜಾಗದ ಪಹಣಿಯಲ್ಲಿ ವಕ್ಫ್‌ ಆಸ್ತಿ ನಮೂದು ಆಗಿದೆ.

ಪಪಂನ ಕಚೇರಿ ಇರುವ ಸರ್ವೇ ನಂಬರ್ ೫೪/೧೫ರ ೧೩ ಗುಂಟೆ ಜಾಗದ ಪಹಣಿ ರಾಜ್ಯಪಾಲರ ಹೆಸರಿನಲ್ಲಿದೆ. ಪಹಣಿಯ ೧೧ರ ಕಲಂನಲ್ಲಿ 2019 ಸೆಪ್ಟೆಂಬರ್‌ 25ರ ಪ್ರಕಾರ ವಕ್ಫ್‌ ಆಸ್ತಿ ಎಂದು ನಮೂದಿಸಲಾಗಿದೆ. ಕುಕನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯ ಹಲವು ವರ್ಷಗಳಿಂದ ಸರ್ವೆ ನಂಬರ 54/15ರ ಜಾಗದಲ್ಲಿದೆ. ಕುಕನೂರು ಸಹ ಪಟ್ಟಣ ಪಂಚಾಯತಿ ಆಗಿ 8 ವರ್ಷ ಕಳೆದವು. ಗ್ರಾಪಂ ಇದ್ದ ಕುಕನೂರು ಪಪಂ ಕಾರ್ಯಾಲಯದ ಪಹಣಿಯಲ್ಲಿ ಸಹ ಈ ಹಿಂದೆ ಯಾವುದೇ ರೀತಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದು ಆಗಿರಲಿಲ್ಲ. ಆದರೆ 2019ರಲ್ಲಿ ಪಹಣಿಯ ಕಲಂನಂ 11ರಲ್ಲಿ ವಕ್ಫ್‌ ಆಸ್ತಿ ಎಂದು ನಮೂದು ಆಗಿದೆ. ಆ ಆಸ್ತಿಯ ಋಣ ವಕ್ಫ್‌ ಮಂಡಳಿಗೆ ಸೇರುತ್ತದೆ ಎಂದು ನಮೂದು ಆಗಿದೆ. ಸದ್ಯ ಕುಕನೂರು ಪಪಂನ ಕಾರ್ಯಾಲಯದ ಜಾಗದ ಪಹಣಿಯಲ್ಲಿ ಈ ರೀತಿ ನಮೂದು ಆಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಕುಕನೂರು ಪಪಂನ ಜಾಗ ವಕ್ಫ್‌ ಮಂಡಳಿಗೆ ಸೇರಿದೆಯಾ ಎಂಬ ಚರ್ಚೆ ಜೋರಾಗಿದೆ.

ಕಾನೂನು ಹೋರಾಟ:

ವಕ್ಫ್ ಆಸ್ತಿ ಎಂದು ಕಾಲಂ ನಂ. 11ರಲ್ಲಿ ನಮೂದಾಗಿರುವುದು ಕುಕನೂರು ಪಪಂ ಮುಖ್ಯಾಧಿಕಾರಿ ಗಮನಕ್ಕೆ ಬಂದಿರಲಿಲ್ಲ. ಈಗ ಗಮನಕ್ಕೆ ಬಂದಿದ್ದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 2019ರಲ್ಲಿ ಕೋರ್ಟ್‌ ಆದೇಶದ ಪ್ರಕಾರ ವಕ್ಫ್‌ ಆಸ್ತಿ ಎಂದು ನಮೂದಿಲಾಗಿದೆ ಎಂದು ಅದರಲ್ಲಿ ತಿಳಿಸಿದ್ದಾರೆ. ಆ ಕೋರ್ಟ್‌ ಆದೇಶದ ಪ್ರತಿಯನ್ನು ಪಡೆಯಲಾಗುವುದು. ಅದರಲ್ಲಿ ಏನಿದೆ ಎಂದು ಪರಾಮರ್ಶಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ತಿಳಿಸಿದ್ದಾರೆ.