ಬಡಗುತಿಟ್ಟು ಯಕ್ಷಗಾನ ಭಾಗವತ ಕೇಶವ ಹೆಗಡೆಗೆ ರಾಜ್ಯೋತ್ಸವ ಪ್ರಶಸ್ತಿ

| Published : Oct 31 2024, 01:00 AM IST

ಬಡಗುತಿಟ್ಟು ಯಕ್ಷಗಾನ ಭಾಗವತ ಕೇಶವ ಹೆಗಡೆಗೆ ರಾಜ್ಯೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತಂದೆ, ತಾಯಿಗಳ ಪ್ರೋತ್ಸಾಹ, ಅಭಿಮಾನಿಗಳ ಪ್ರೀತಿಯಿಂದ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ ಎಂದು ಯಕ್ಷಗಾನ ಭಾಗವತರಾದ ಕೇಶವ ಹೆಗಡೆ ಕೊಳಗಿ ತಿಳಿಸಿದರು.

ಸಿದ್ದಾಪುರ: ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.ಸಿದ್ದಾಪುರ ತಾಲೂಕಿನ ಕೊಳಗಿಯ ಯಕ್ಷಗಾನ ಮನೆತನದಲ್ಲಿ ೧೯೬೪ರ ಮಾ. ೮ರಂದು ಜನಿಸಿದ ಕೇಶವ ಹೆಗಡೆ ಅವರ ತಂದೆ ಪ್ರಸಿದ್ಧ ಯಕ್ಷಗಾನ ಕಲಾವಿದ ಅನಂತ ಹೆಗಡೆ, ತಾಯಿ ಅರುಂಧತಿ ಹೆಗಡೆ. ಇಬ್ಬರು ತಮ್ಮಂದಿರು, ಮೂವರು ತಂಗಿಯರು. ಪತ್ನಿ ಪ್ರೀತಾ, ಮಗಳು ಹರ್ಷಿತಾ.ಬಾಲ್ಯದಿಂದಲೇ ಯಕ್ಷಗಾನದ ಒಲವು ಬೆಳೆಸಿಕೊಂಡಿದ್ದ ಕೇಶವ ಹೆಗಡೆ ಸಿದ್ದಾಪುರದ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿಸಿದ ಆನಂತರದಲ್ಲಿ ಉಡುಪಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಪ್ರಸಿದ್ಧ ಭಾಗವತರಾದ ನಾರ್ಣಪ್ಪ ಉಪ್ಪೂರು, ಕೆ.ಪಿ. ಹೆಗಡೆ ಅವರ ಶಿಷ್ಯತ್ವದಲ್ಲಿ ಭಾಗವತಿಕೆಯ ಅಭ್ಯಾಸ ಪಡೆದುಕೊಂಡರು.

ನಂತರದಲ್ಲಿ ಪ್ರಥಮವಾಗಿ ಹೊನ್ನಾವರ ತಾಲೂಕಿನ ಗುಂಡಬಾಳ ಮೇಳದಲ್ಲಿ ಭಾಗವತರಾಗಿ ವೃತ್ತಿಯನ್ನು ಆರಂಭಿಸಿದರು. ಮೂಲ್ಕಿ, ಅಮೃತೇಶ್ವರಿ, ಸಾಲಿಗ್ರಾಮ, ಕಮಲಶಿಲೆ, ಶಿರಸಿ, ಪಂಚಲಿಂಗ, ಬಚ್ಚಗಾರು, ಯಾಜಿ ಮಿತ್ರ ಮಂಡಳಿ, ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಕೊಂಡದಕುಳಿ ಮೇಳ ಮುಂತಾದ ಮೇಳಗಳಲ್ಲಿ ಪ್ರಮುಖ ಭಾಗವತರಾಗಿ ಕಾರ್ಯನಿರ್ವಹಿಸಿ ಪ್ರಸಿದ್ಧಿ ಪಡೆದರು.ಕೇಶವ ಹೆಗಡೆ ಅವರಿಗೆ ಸಂದ ಪ್ರಶಸ್ತಿಗಳು, ಪುರಸ್ಕಾರಗಳು ಅಸಂಖ್ಯ. ಮಹಾಬಲ ಹೆಗಡೆ ಪ್ರಶಸ್ತಿ, ನೆಬ್ಬೂರು ನಾರಾಯಣ ಪ್ರಶಸ್ತಿ, ಹೈದರಾಬಾದ್‌ನ ಕರ್ನಾಟಕ ಕರಾವಳಿ ಮೈತ್ರಿ ಸಂಘದ ಪ್ರಶಸ್ತಿ, ನಂತರ ಅದೇ ಸಂಘ ನೀಡಿದ ಗಾನವಾರಿಧಿ ಪ್ರಶಸ್ತಿ, ಹೈಕೋರ್ಟ್‌ ವಕೀಲರ ಸಂಘ ನೀಡಿದ ಕರಾವಳಿ ಕೋಗಿಲೆ ಪ್ರಶಸ್ತಿ, ನಮ್ಮನೆ ಪ್ರಶಸ್ತಿ, ಯಕ್ಷಕಲಾ ರಂಜಿನಿ ಪ್ರಶಸ್ತಿ ಮುಂತಾಗಿ ಅನೇಕ ಪ್ರಶಸ್ತಿಗಳು ಸಂದಿವೆ. ವೃತ್ತಿ ಮೇಳದ ಭಾಗವತಿಕೆಯಿಂದ ಹಿಂದೆ ಸರಿದ ನಂತರದಲ್ಲಿ ಹಲವಾರು ಹವ್ಯಾಸಿ ಮೇಳಗಳ ಜತೆ ಸಕ್ರಿಯರಾಗಿರುವ ಕೇಶವ ಹೆಗಡೆ ಅವರ ಸಿರಿಕಂಠ ಯಕ್ಷಗಾನ ಪ್ರಿಯರನ್ನು ಇಂದಿಗೂ ರಂಜಿಸುತ್ತಿದೆ.ತಮ್ಮ ಸುಶ್ರಾವ್ಯದ ಧ್ವನಿಯಿಂದ ಯಕ್ಷಗಾನದ ಹಳೆಯ ಮಟ್ಟುಗಳನ್ನು ಹಾಡಬಲ್ಲ ಕೇಶವ ಹೆಗಡೆ ನೆಬ್ಬೂರು ನಾರಾಯಣ ಭಾಗವತರಿಂದ ಪ್ರಶಂಸೆ ಪಡೆದವರು. ತಮ್ಮ ಆಲಾಪನೆಯ ಮಾಧುರ‍್ಯದಿಂದ ಯಕ್ಷಪ್ರಿಯರ ಮನಗೆದ್ದವರು. ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆಯವರಂಥ ದಿಗ್ಗಜರೂ ಸೇರಿದಂತೆ ಪ್ರಮುಖ ಪಾತ್ರಧಾರಿಗಳಿಗೆ ಪದ್ಯ ಹೇಳಿ ಅವರಿಂದ ಭೇಷ್ ಎನಿಸಿಕೊಂಡರು.

ತಮ್ಮ ಗುರುಗಳ ರೀತಿಯಲ್ಲೇ ಒಂದು ಪ್ರಸಂಗವನ್ನು ಹೇಗೆ ಆಡಿಸಬೇಕು, ಆ ಆಖ್ಯಾನ ಯಾವ ಅಪಸವ್ಯವೂ ಇಲ್ಲದೇ ಶಿಸ್ತುಬದ್ದವಾಗಿ ನಡೆಯಬೇಕು ಎನ್ನುವ ವಿಶಿಷ್ಟವಾದ ಯೋಜನಾಬದ್ಧತೆಯನ್ನು ಹೊಂದಿದ್ದಾರೆ. ಹಲವು ಯಕ್ಷಗಾನ ಪ್ರಸಂಗಗಳ ಪದ್ಯಗಳನ್ನು ಪುಸ್ತಕದ ಅಗತ್ಯವಿಲ್ಲದೇ ಹಾಡಬಲ್ಲ ಅಪರೂಪದ ಶಕ್ತಿಯನ್ನು ಹೊಂದಿರುವ ಕೇಶವ ಹೆಗಡೆ ಅವರಿಗೆ ಆ ಪದ್ಯಗಳೆಲ್ಲ ಕಂಠಪಾಠ. ಪಾತ್ರ ನಿರ್ವಹಣೆಯ ಕುರಿತಾಗಿ ವೇಷಧಾರಿಗಳ ಜತೆ ಯಾವುದೇ ಮುಲಾಜಿಲ್ಲದೇ ಅಭಿಪ್ರಾಯ ವ್ಯಕ್ತಪಡಿಸುವ ಅವರ ಈ ಗುಣ ಯಕ್ಷಗಾನದ ಕುರಿತಾದ ಕಾಳಜಿಯನ್ನು ಬಿಂಬಿಸುತ್ತದೆ.ಪ್ರಶಸ್ತಿ ಘೋಷಣೆಯಾದ ಕುರಿತು ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ತನ್ನ ಮಗಳನ್ನು ಶಾಲೆಯಿಂದ ಸ್ಕೂಟರ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಸಂಪರ್ಕಿಸಿದಾಗ ಅವರಿಗೆ ಪ್ರಶಸ್ತಿಯ ಕುರಿತಾಗಿ ತಿಳಿದಿದೆ.

ರ್ಕಾರಕ್ಕೆ ಅಭಾರಿ: ಪ್ರಶಸ್ತಿ ದೊರಕುತ್ತಿರುವುದು ಸಹಜವಾಗಿಯೇ ಸಂತೋಷ ತಂದಿದೆ. ಕಳೆದ ೪೦ ವರ್ಷಗಳ ಯಕ್ಷಗಾನದ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದಕ್ಕೆ ಸರ್ಕಾರಕ್ಕೆ ಅಭಾರಿಯಾಗಿದ್ದೇನೆ. ತಂದೆ, ತಾಯಿಗಳ ಪ್ರೋತ್ಸಾಹ, ಅಭಿಮಾನಿಗಳ ಪ್ರೀತಿಯಿಂದ ಈ ಪ್ರಶಸ್ತಿ ದೊರೆತಿದೆ ಎಂದು ಯಕ್ಷಗಾನ ಭಾಗವತರಾದ ಕೇಶವ ಹೆಗಡೆ ಕೊಳಗಿ ತಿಳಿಸಿದರು.