ಗ್ರಾಮದಲ್ಲಿ ಒಗ್ಗಟ್ಟಿದ್ದರೆ ಗ್ರಾಮಾಭಿವೃದ್ಧಿ: ಸಚಿವ ಚಲುವರಾಯಸ್ವಾಮಿ

| Published : Oct 31 2024, 01:00 AM IST

ಗ್ರಾಮದಲ್ಲಿ ಒಗ್ಗಟ್ಟಿದ್ದರೆ ಗ್ರಾಮಾಭಿವೃದ್ಧಿ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಂದಾಣಿಕೆ ಕೊರತೆಯಿಂದ ದೇವಸ್ಥಾನಗಳು ಅರ್ಥದಲ್ಲಿಯೇ ನಿಂತಿರುವುದು ಹಾಗೂ ಪ್ರಾರಂಭವಾಗದೇ ಇರುವುದನ್ನು ಕಾಣುತ್ತೇವೆ. ಆದರೆ, ಈ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರ ಮತ್ತು ಒಗ್ಗಟ್ಟಿನಿಂದ ಸುಂದರ ದೇವಸ್ಥಾನ ನಿರ್ಮಿಸಿರುವುದು ಗ್ರಾಮದ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶಿಸ್ತು, ಸಂಯಮ ಸಂಸ್ಕಾರ ಜೊತೆಗೆ ಗ್ರಾಮದಲ್ಲಿ ಒಗ್ಗಟ್ಟು ಇದ್ದರೆ ಗ್ರಾಮಾಭಿವೃದ್ಧಿಯೊಂದಿಗೆ ದೇವಸ್ಥಾನ ಹಾಗೂ ಶಾಲಾ ಕಾಲೇಜುಗಳನ್ನು ಸುಲಭವಾಗಿ ನಿರ್ಮಿಸಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ವೀರಾಜೀಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಅವರು, ಹಲವು ಗ್ರಾಮಗಳಲ್ಲಿ ಹಣದ ಸಮಸ್ಯೆ ಇಲ್ಲದಿದ್ದರೂ ಹೊಂದಾಣಿಕೆ ಕೊರತೆಯಿಂದ ದೇವಸ್ಥಾನಗಳು ಅರ್ಥದಲ್ಲಿಯೇ ನಿಂತಿರುವುದು ಹಾಗೂ ಪ್ರಾರಂಭವಾಗದೇ ಇರುವುದನ್ನು ಕಾಣುತ್ತೇವೆ. ಆದರೆ, ಈ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರ ಮತ್ತು ಒಗ್ಗಟ್ಟಿನಿಂದ ಸುಂದರ ದೇವಸ್ಥಾನ ನಿರ್ಮಿಸಿರುವುದು ಗ್ರಾಮದ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು.

ಧಾರ್ಮಿಕ ಹಿನ್ನೆಲೆಯಲ್ಲಿ ಬಂದ ನಮ್ಮ ದೇಶದಲ್ಲಿ ಸಂಸ್ಕಾರ ಹುಟ್ಟಿನಿಂದಲೇ ಬಂದಿದೆ. ಮನಶಾಂತಿ ವಿಚಲಿತಗೊಂಡಾಗ ದೇವಸ್ಥಾನಕ್ಕೆ ಬಂದು ದೇವರು, ಗುರುಗಳನ್ನು ನೆನೆದು ಐದು ನಿಮಿಷ ಕುಳಿತರೇ ನೆಮ್ಮದಿ, ಶಾಂತಿ ಸಿಗಲಿದೆ. ಎಲ್ಲರಿಗೂ ದೇವರು ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಹಾರೈಸಿದರು.

ಗ್ರಾಮಸ್ಥರು ಬಸವ ಭವನ ಹಾಗೂ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಿಸಿಕೊಳ್ಳುವಂತೆ ಮನವಿ ನೀಡಿದ್ದಾರೆ. ಶಾಸಕ ಪಿ.ಎಂ ನರೆಂದ್ರಸ್ವಾಮಿ ಅವರು ಹಿರಿಯ ಶಾಸಕರಾಗಿದ್ದು, ಸರ್ಕಾರದಿಂದ ಅವರದೇ ಆದ ದಾಟಿಯಲ್ಲಿ ಅನುದಾನವನ್ನು ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಗ್ರಾಮದ ಬೇಡಿಕೆಗಳನ್ನು ಶಾಸಕರ ನೇತೃತ್ವದಲ್ಲಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ವೀರಾಜೀಪುರ ಗ್ರಾಮದ ಡಾ.ನಂದೀಶ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದರ ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ ತನ್ನದೇ ಆದ ಪ್ರಖ್ಯಾತಿ ಪಡೆದಿದ್ದಾರೆ. ಗ್ರಾಮಸ್ಥರ ಒಟ್ಟಟ್ಟಿನಿಂದ ಸುಂದರವಾದ ದೇವಸ್ಥಾನ ನಿರ್ಮಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಗ್ರಾಮಸ್ಥರ ಸಂಕಲ್ಪದೊಂದಿಗೆ ಡಾ.ನಂದೀಶ್‌ರವರ ನೇತೃತ್ವದಲ್ಲಿ ಗ್ರಾಮಕ್ಕೆ ಅವಶ್ಯಕವಾಗಿ ಬೇಕಾಗಿದ್ದ ಬಸವೇಶ್ವರ ದೇವಸ್ಥಾನ ನಿರ್ಮಿಸಿರುವುದು ಇಲ್ಲಿನ ಭಕ್ತರ ಭಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯವನ್ನು ಸಮರ್ಪಕವಾಗಿ ಕಲ್ಪಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಪೂರಿಗಾಲಿ ಹನಿ ನೀರಾವರಿ ಯೋಜನೆ, ಕಿರುಗಾವಲು ಬಹುಹಳ್ಳಿಗಳ ಕಾವೇರಿ ನೀರು ಪೂರೈಕೆ ಕಾಮಗಾರಿ ಅಂತಿಮ ಘಟ್ಟಕ್ಕೆ ಬಂದಿದ್ದು, ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಬಸವರಾಜೇಂದ್ರ ಶಿವಚಾರ್ಯ ಸ್ವಾಮೀಜಿ, ವೈದ್ಯನಾಥಪುರದ ರೇಣುಕಾ ಶಿವಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್, ಜಿಪಂ ಮಾಜಿ ಸದಸ್ಯ ಆರ್.ಎನ್.ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ,ರಾಜು, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಡಾ.ನಂದೀಶ್ ಸೇರಿದಂತೆ ಹಲವರು ಇದ್ದರು.