ಬೃಂದಾವನ ಪ್ರವೇಶ ನಿರಾಕರಣೆ: ಪ್ರವಾಸಿಗರಿಂದ ಟೆಕೆಟ್ ಕೌಂಟರ್ ಗ್ಲಾಸ್ ಒಡೆದು ದಾಂಧಲೆ

| Published : Aug 18 2025, 12:00 AM IST

ಬೃಂದಾವನ ಪ್ರವೇಶ ನಿರಾಕರಣೆ: ಪ್ರವಾಸಿಗರಿಂದ ಟೆಕೆಟ್ ಕೌಂಟರ್ ಗ್ಲಾಸ್ ಒಡೆದು ದಾಂಧಲೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ವಿಖ್ಯಾತ ಕೆಆರ್‌ಎಸ್ ಬೃಂದಾವನದಲ್ಲಿ ಪ್ರವೇಶ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಪ್ರವಾಸಿಗರು ಟಿಕೆಟ್ ಕೌಂಟರ್ ಗ್ಲಾಸ್ ಒಡೆದು ದಾಂಧಲೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿಶ್ವ ವಿಖ್ಯಾತ ಕೆಆರ್‌ಎಸ್ ಬೃಂದಾವನದಲ್ಲಿ ಪ್ರವೇಶ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಪ್ರವಾಸಿಗರು ಟಿಕೆಟ್ ಕೌಂಟರ್ ಗ್ಲಾಸ್ ಒಡೆದು ದಾಂಧಲೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಬೃಂದಾವನಕ್ಕೆ ಶುಕ್ರವಾರ ರಾತ್ರಿ 9.30ರ ವರೆಗೆ ದೀಪಾಲಂಕಾರ ವಿಸ್ತರಣೆ ಮಾಡಲಾಗಿತ್ತು. ಆದರೆ, ಅರ್ಧ ಗಂಟೆ ಮುಂಚಿತವಾಗಿ ಪ್ರವೇಶ ನಿಷೇಧ ಮಾಡಿ ಜೊತೆಗೆ ಟೋಲ್‌ನಲ್ಲಿ ಯಾವುದೇ ಮಾಹಿತಿ ನೀಡದೆ ಪಾರ್ಕಿಂಗ್ ಹಾಗೂ ಟೋಲ್ ಶುಲ್ಕ ಪಡೆದು ಬೃಂದಾವನಕ್ಕೆ ಪ್ರವೇಶ ನೀಡಿದ್ದರಿಂದ ನೂರಾರು ಪ್ರವಾಸಿಗರು ಕೋಪಗೊಂಡರು. ಪ್ರವಾಸಿಗರಿಗೆ ಯಾವುದೇ ಮಾಹಿತಿ ನೀಡಿಲ್ಲ. ಪ್ರತಿ ವಾಹನಕ್ಕೆ 300 ರಿಂದ 500 ರು. ತನಕ ಶುಲ್ಕ ಪಡೆದು ಇದೀಗ ಪ್ರವೇಶ ಟಿಕೆಟ್ ನೀಡದೆ ವಾಪಸ್ ಕಳುಹಿಸುತ್ತಿರುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಬೃಂದಾವನ ಪ್ರವೇಶದ ನಿರ್ವಹಣೆ ಟೆಂಡರ್ ಪಡೆದಿರುವ ಕೆಸಿಐಸಿ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರಿಂದ ಪ್ರವಾಸಿಗರು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕುಮಕಿ ನಡೆದು ಪ್ರವಾಸಿಗರು ಟಿಕಟ್ ಕೌಂಟರ್ ಗ್ಲಾಸ್ ಒಡೆದು ದಾಂಧಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಂತರ ವಿಷಯ ತಿಳಿದು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು ಮಧ್ಯ ಪ್ರವೇಶಿಸಿ ನಿಯಂತ್ರಣಕ್ಕೆ ತಂದು ಪರಿಸ್ಥಿತಿ ಶಾಂತಗೊಳಿಸಿದರು. ಕಾವೇರಿ ನೀರಾವರಿ ನಿಗಮದ ಎಇಇ ಘಾರೂಕು ಅಭು ಮಾಹಿತಿ ಪಡೆದು ಸ್ಥಳದಲ್ಲಿದ್ದ ಪ್ರವಾಸಿಗರಿಗೆ ತೊಂದರೆ ಆಗದ ರೀತಿ ಬೃಂದಾವನಕ್ಕೆ ಒಳಬಿಡಲು ಸೂಚನೆ ನೀಡಿದರು.

ಕೆಆರ್‌ಎಸ್‌ನಿಂದ ೫೦ ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಹೀಗಾಗಿ ಭಾನುವಾರ ಮಧ್ಯಾಹ್ನದ ವೇಳೆಗೆ ಜಲಾಶಯದಿಂದ ಸುಮಾರು ೫೦ ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿಗೆ ಹರಿಯಬಿಡಲಾಗಿದೆ. ಒಳಹರಿವಿನ ಪ್ರಮಾಣ ಏರಿಕೆಯಾದಲ್ಲಿ ನದಿಗೆ ಹರಿಯಬಿಡಲಾಗುವ ನೀರಿನ ಪ್ರಮಾಣವೂ ಹೆಚ್ಚಾಗುವ ಸಂಭವವಿದೆ. ಆದ್ದರಿಂದ ನದಿ ಪಾತ್ರಕ್ಕೆ ಸುಳಿಯದಂತೆ, ಜಾನುವಾರುಗಳನ್ನು ಬಿಡದಂತೆ ಎಚ್ಚರವಹಿಸುವಂತೆ ಸೂಕ್ತ ಮುಂಜಾಗ್ರತೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ ೧೨೪.೮೦ ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯಲ್ಲಿ ೧೨೪.೪೬ ಅಡಿ ನೀರು ಸಂಗ್ರಹವಾಗಿದೆ. ೪೦.೫೯೮ ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.