ಕೇಂದ್ರೀಯ ವಿವಿ ಕ್ಯಾಂಪಸ್‌ಲ್ಲಿ ಗೂಂಡಾಗಳ ಪ್ರವೇಶ: ಆರೋಪ

| Published : Mar 30 2024, 12:46 AM IST

ಸಾರಾಂಶ

ಸಚಿವ ಪ್ರಿಯಾಂಕ ಖರ್ಗೆ ಕುಮ್ಮಕ್ಕಿನಿಂದ ಕ್ಯಾಂಪಸ್‌ನಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಡ್ರೋಣ್‌ಗಳ ಹಾವಳಿ ಶುರುವಾಗಿದೆ ಎಂದು ಎಬಿವಿಪಿ ಉ-ಕ ರಾಜ್ಯ ಕಾರ್ಯದರ್ಶಿ ಸಚೀನ್‌ ಕುಳಗೇರಿ ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ನಲ್ಲಿ ಜಿಲ್ಲಾ ಉಸ್ತವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಕುಮ್ಮಕ್ಕು, ಪೊಲೀಸ್‌ ಇಲಾಖೆ ಸಹಕಾರದಿಂದ ಭಯದ ವಾತಾವರಣ ಮೂಡಿದೆ. ವಿಶ್ವ ವಿದ್ಯಾಲಯದಲ್ಲಿ ಗೂಂಡಾಗಳ ಪ್ರವೇಶವಾಗಿದೆ, ಡ್ರೋಣ್‌ಗಳ ಹಾವಳಿ ಶುರುವಾಗಿದೆ ಎಂದು ಎಬಿವಿಪಿ ಉ-ಕ ರಾಜ್ಯ ಕಾರ್ಯದರ್ಶಿ ಸಚೀನ್‌ ಕುಳಗೇರಿ ದೂರಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಸ್ವಾಯತ್ತವಾದ ಸಂಸ್ಥೆಯಾಗಿದ್ದು ರಾಜಕೀಯ ಹಸ್ತಕ್ಷೇಪ ರಹಿತವಾಗಿ ಕೆಲಸ ಮಾಡಬೇಕು. ಹೊರಗಿನ ವ್ಯಕ್ತಿಗಳು, ಸಂಘಟನೆಗಳು ಮಧ್ಯ ಪ್ರವೇಶ ಮಾಡಿದರೆ ಭಯದ ವಾತಾವರಣ ಉಂಟು ಮಾಡುತ್ತದೆ ಎಂದರು.

ಇದಕ್ಕೆ ನಿದರ್ಶನವಾಗಿ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಸಚಿವರಾದ ಪ್ರಿಯಾಂಕ ಖರ್ಗೆಯವರು ವಿಶ್ವವಿದ್ಯಾಲಯದ ಕುಲಪತಿಗಳು, ಕುಲ ಸಚಿವರು ಹಾಗೂ ಎಬಿವಿಪಿ ಕಾರ್ಯಕರ್ತರ ವಿರುದ್ಧ ನೀವು ಪ್ರಕರಣ ದಾಖಲಿಸಿ ನಾನು ನಿಮ್ಮ ಹಿಂದೆ ಇರುತ್ತೇನೆ ಎಂದು ಪೊಲೀಸರಿಗೆ ಹೇಳಿರುವ ಮಾತುಗಳು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಸಚೀನ್‌ ಹೇಳಿದ್ದಾರೆ.

ಹೊರಗಿನ ವ್ಯಕ್ತಿಗಳ / ಸಂಘಟನೆಗಳ ಒತ್ತಾಯಕ್ಕೆ ಮಣಿದು ಎಬಿವಿಪಿ ಕಾರ್ಯಕ್ರಮಗಳಿಗೆ ತಡೆ ಹಾಕುವುದು, ಬೆದರಿಸುವುದು ಇದಕ್ಕೆ ಪೊಲೀಸ್ ಇಲಾಖೆಯು ಸಹಿತ ಕೈಜೋಡಿಸುತ್ತಿರುವುದು ಅವರ ಬೆಂಬಲಕ್ಕೆ ನಿಂತಿರುವುದು ಕಂಡು ಬರುತ್ತಿದೆ. ಈ ರೀತಿಯ ವ್ಯವಸ್ಥೆಯನ್ನ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಿರ್ಮಾಣ ಮಾಡುತ್ತಿರುವುದು ಖಂಡನಿಯ ಸಂಗತಿ.

ಎಬಿವಿಪಿ ಇಂದು ದೇಶದ ಮುಂಚೂಣಿ ವಿದ್ಯಾರ್ಥಿ ಸಂಘಟನೆ ಆಗಿದ್ದು, ಎಲ್ಲಾ ಕೇಂದ್ರೀಯ ವಿಶ್ವ ವಿದ್ಯಾಲಯ, ಐಐಟಿ, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ವಿದ್ಯಾರ್ಥಿ ಸಂಘಟನೆ ಆಗಿದೆ. ರಾಜಕೀಯೇತರವಾಗಿ ಕೆಲಸ ಮಾಡುತ್ತಿರುವ ಸಂಘಟನೆಯಾದ ಎಬಿವಿಪಿಯನ್ನು ಇತ್ತೀಚಿಗೆ ಕೆಲವರು ರಾಜಕೀಯ ಕಾರಣಗಳಿಂದ ವಿರೋಧಿಸುವ, ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿ ಸಂಘಟನೆಯ ಕೆಲಸವನ್ನು ಯಾರೂ ತಡೆಯಲಾಗದು. ತಡೆಯಲು ಮಾಡುವ ಪ್ರಯತ್ನ ಸಂವಿಧಾನ ವಿರೋಧಿ ಎಂದು ಸಚೀನ್‌ ದೂರಿದರು.

ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಶಶಿಲ್ ನಮೋಶಿ ಎಬಿವಿಪಿಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಪಿಡಿಎ ಎಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಾದ ಜಿಬಿ ಮಿಸ್ಸೆ, ಜಿಲ್ಲಾ ಪ್ರಮುಖರಾದ ಪ್ರಮೋದ್ ನಾಗರ್ ಕರ್, ಹನುಮಂತ ಬಗಲಿ ಶಾಂತಕುಮಾರ್, ಕೇಂದ್ರೀಯ ಕಾರ್ಯಸಮಿತಿ ಸದಸ್ಯ ನರೆಂದ್ರಕುಮಾರ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಹಣಮಂತ ಬಗಲಿ, ನಾಗಶ್ರೀ ಇದ್ದರು.