ಸಾರಾಂಶ
ಲಕ್ಷ್ಮೇಶ್ವರ: ರಾಜ್ಯದಲ್ಲಿ ಕಳೆದ ಎರಡು ದಿನಗಳ ಹಿಂದೆ ಪ್ರಾರಂಭವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಕಾರ್ಯವು ಸರಿಯಾಗಿ ಆಗದೆ ಜನರಿಂದ ನಗೆಪಾಟಲಿಗೆ ಈಡಾಗುತ್ತಿದೆ. ಕೂಡಲೇ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು ಇಲ್ಲವೆ ಸಮಸ್ಯೆ ಸರಿಯಾಗುವ ವರೆಗೆ ಗಣತಿ ಕಾರ್ಯವನ್ನು ಮುಂದೂಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು, ಸಮೀಕ್ಷೆಗೆ ನೀಡಲಾಗುವ ಹೊಸ ವರ್ಷನ್ ಓಪನ್ ಆಗದೆ ಇರುವುದು, ನಿಯೋಜಿಸಿರುವ ಮನೆಗಳ ಲೊಕೇಶನ್ ಸಿಗದೇ ಇರುವುದು, ನಿಗದಿಪಡಿಸಿರುವ ಮನೆಗಳು ಒಂದೇ ಕಡೆ ಇಲ್ಲದಿರುವುದು, ಮನೆ ಸಮೀಕ್ಷೆ ಮಾಡಿದ ನಂತರ ಸಬ್ಮಿಟ್ ಆಗದೇ ಇರುವುದು, ಓಟಿಪಿ ಸಮಸ್ಯೆ, ಹೀಗೇ ಹತ್ತು ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಾಮಾಜಿಕ ಮತ್ತು ಆರ್ಥಿಕ ಗಣಿತೀಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಪರಿಹರಿಸುವ ವರೆಗೂ ಮುಂದೂಡುವಂತೆ ಮನವಿ ಮಾಡಲಾಗಿದೆ.ಅಲ್ಲದೆ ಸಮೀಕ್ಷೆದಾರರು ಗಣತಿಗೆ ಬಳಕೆಯಾಗುವ ಆಪ್ ಸರಿಯಾಗಿ ಓಪನ್ ಆಗುತ್ತಿಲ್ಲ. ಆಪ್ ನಲ್ಲಿ ಸಾಕಷ್ಟು ಸಮಸ್ಯೆ ಇದೆ. ಮ್ಯಾಪ್ ಲೊಕೇಷನ್ ಮೂಲಕ ಮನೆ ವಿಳಾಸ ಪತ್ತೆ ಮಾಡಿ ಹೋದರೆ ಅಲ್ಲಿ ಮನೆ ಬದಲು ಹಳ್ಳ ಇದೆ. ಮತ್ತೆ ಕೆಲವು ಕಡೆ ಮನೆಯ ವಿಳಾಸ ತಪ್ಪು ತೋರಿಸುತ್ತದೆ. ಕೆಲವು ಕಡೆ ಬೇರೆಯ ವಿಳಾಸ ತೋರಿಸುತ್ತದೆ. ಪ್ರತಿ ಮನೆಗೂ ಲೊಕೇಷನ್ ಹಾಕಿಕೊಂಡು ಹುಡುಕುವುದು ಕಷ್ಟವಾಗುತ್ತಿದೆ. ಎಂದು ಶಿಕ್ಷಕರ ಮನವಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ಎಲ್ಲ ತಾಂತ್ರಿಕ ಸಮಸ್ಯೆಗಳು ಬಗೆಹರಿಯುವರೆಗೆ ಸಮೀಕ್ಷೆ ಮುಂದೂಡಿ ಪವಿತ್ರವಾದ ದಸರಾ ಹಬ್ಬವನ್ನು ಆಚರಿಸಲು ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಆರೋಗ್ಯ ಸಮಸ್ಯೆ, ವಿಕಲಚೇತನರಿಗೆ ಹಾಗೂ ನಿವೃತ್ತಿ ಅಂಚಿನಲ್ಲಿರುವರಿಗೆ ವಿನಾಯತಿ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಗುರುರಾಜ ಹವಳದ, ಎಂ.ಎ. ನದಾಫ, ಎಂ.ಡಿ. ವಾರದ, ಬಿ.ಎಂ. ಯರಗುಪ್ಪಿ, ಪ್ರಶಾಂತ ಸನದಿ, ಎಂ.ಎಸ್. ಹಿರೇಮಠ, ಎಲ್.ಎನ್. ನಂದೆಣ್ಣವರ, ಡಿ.ಡಿ. ಲಮಾಣಿ, ಗೀತಾ ಹಳ್ಯಾಳ, ಎಚ್.ಡಿ. ನಿಂಗರಡ್ಡಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಶಿಕ್ಷಕರು, ನೌಕರರು ಹಾಜರಿದ್ದರು.