ಜನರ ಸಹಕಾರವಿಲ್ಲದೆ ಗಣತಿ ಕಾರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಗಣತಿದಾರರು ಪ್ರಮುಖ ಪಾತ್ರ ವಹಿಸಬೇಕು.
ಗದಗ: ಜನಗಣತಿ ದೇಶದ ಯೋಜನೆ ರೂಪಿಸಲು ಆಧಾರವಾಗಿದ್ದು, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರದ ಯೋಜನೆಗಳು ರೂಪುಗೊಳ್ಳಲು ಇದರ ಮಾಹಿತಿ ಬಹುಮುಖ್ಯವಾಗುತ್ತದೆ. ಗಣತಿದಾರರು ಯಾವುದೇ ರೀತಿಯ ತಪ್ಪಿಲ್ಲದೆ, ಶಿಸ್ತು ಮತ್ತು ಸಂಯಮದಿಂದ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಗುರುಬಸವ ಪ್ರೌಢಶಾಲೆಯಲ್ಲಿ ಜನಗಣತಿ ಕಾರ್ಯವನ್ನು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಗದಗ ನಗರ ಮತ್ತು ಗ್ರಾಮೀಣ ಭಾಗಗಳ ಗಣತಿದಾರರಿಗೆ ಮೂರು ದಿನಗಳ ಕಾಲ ನಡೆದ ಸಮಗ್ರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜನರ ಸಹಕಾರವಿಲ್ಲದೆ ಗಣತಿ ಕಾರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಗಣತಿದಾರರು ಪ್ರಮುಖ ಪಾತ್ರ ವಹಿಸಬೇಕು. ಪ್ರತಿ ಮನೆಗೂ ಭೇಟಿ ನೀಡುವಾಗ ಸಹಾನುಭೂತಿಯೊಂದಿಗೆ, ಗೌರವದಿಂದ ವರ್ತಿಸುವಂತೆ ಸೂಚನೆ ನೀಡಿದರು.ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ಜನಗಣತಿ ಪ್ರಕ್ರಿಯೆ ದೇಶದ ಅಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ಸಾಧನವಾಗಿದ್ದು, ಸಂಗ್ರಹವಾಗುವ ಪ್ರತಿಯೊಂದು ಮಾಹಿತಿ ಭವಿಷ್ಯದ ಯೋಜನೆಗಳಿಗೆ ಮಾರ್ಗಸೂಚಿಯಾಗುತ್ತದೆ. ಆದ್ದರಿಂದ ಯಾವುದೇ ಅಸಡ್ಡೆ ತೋರದೆ, ನಿಖರ ಹಾಗೂ ಪೂರ್ಣ ಮಾಹಿತಿಯನ್ನು ಸಂಗ್ರಹಿಸುವಂತೆ ಗಣತಿದಾರರಿಗೆ ಸೂಚಿಸಿದರು.ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಮಾತನಾಡಿ, ಜನಗಣತಿ ಕಾರ್ಯ ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಮಾಹಿತಿ ಆಧಾರದ ಮೇಲೆ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದರಿಂದ, ಪ್ರತಿಯೊಬ್ಬ ಗಣತಿದಾರರೂ ತಮ್ಮ ಜವಾಬ್ದಾರಿಯನ್ನು ಅರಿತು, ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಪರಶುರಾಮ್ ಶೇರಖಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗಣತಿದಾರರು ಇದ್ದರು.