ಸಾರಾಂಶ
ಪೆರಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವವಾಹಿನಿ ಮಾಣಿ ಘಟಕ ಆತಿಥ್ಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಬಂಟ್ವಾಳ ವಲಯ, ಮಂಗಳೂರು ವಿಭಾಗ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ಹಸಿರು ವನ- ಸಂತೃಪ್ತ ಮನ’ ಹಾಗೂ ‘ಉಚಿತ ಪುಸ್ತಕ ವಿತರಣಾ’ ಕಾರ್ಯಕ್ರಮ ಭಾನುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಜಗದ ಎಲ್ಲ ಜೀವಿಗಳ ಜೊತೆಗೆ, ಪ್ರತಿಯೊಬ್ಬನಿಗೂ ಪರಿಸರ ಅತ್ಯಮೂಲ್ಯ ಮತ್ತು ಅತ್ಯಗತ್ಯ. ಪ್ರಕೃತಿಯಿಂದ ನಮಗೆ ಉಪಯೋಗವಿದೆ. ಗಾಳಿ, ನೆರಳು ಹೀಗೆ ವಿವಿಧ ರೀತಿಯಲ್ಲಿ ಪರಿಸರವು ನಮಗೆ ಸಹಕಾರಿಯಾಗಿದೆ ಎಂದು ಬಂಟ್ವಾಳದ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಹೇಳಿದರು.ಅವರು ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಜೆಯಲ್ಲಿ ಯುವವಾಹಿನಿ ಮಾಣಿ ಘಟಕ ಆತಿಥ್ಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಬಂಟ್ವಾಳ ವಲಯ, ಮಂಗಳೂರು ವಿಭಾಗ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ‘ಹಸಿರು ವನ- ಸಂತೃಪ್ತ ಮನ’ ಹಾಗೂ ‘ಉಚಿತ ಪುಸ್ತಕ ವಿತರಣಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪರಿಸರ ದಿನಾಚರಣೆ ಕಾರ್ಯಕ್ರಮ ಮಾಡುವ ಮೂಲಕ ಪರಿಸರವನ್ನು ಉಳಿಸಿ, ಬೆಳೆಸುವಂತ ಕೆಲಸವಾಗಬೇಕು. ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವು ಪರಿಸರವನ್ನು ಪೋಷಿಸುವಂತ ಕೆಲಸ ಆಗಬೇಕು ಎಂದವರು ಕರೆ ನೀಡಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋನಪ್ಪ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಘಟಕದ ಗೌರವ ಸಲಹೆಗಾರ ನಾರಾಯಣ ಸಾಲ್ಯಾನ್ ಮಾತನಾಡಿದರು.ಇದೇ ವೇಳೆ ಶಾಲೆಯ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗಿನ ಮಕ್ಕಳಿಗೆ ಉಚಿತವಾಗಿ ಘಟಕದ ವತಿಯಿಂದ ಪುಸ್ತಕ ವಿತರಿಸಲಾಯಿತು. ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಗಿಡ ನೀಡಲಾಯಿತು.
ಘಟಕ ಅಧ್ಯಕ್ಷ ನಾಗೇಶ್ ಪೂಜಾರಿ ಕೊಂಕಣಪದವು ಕಾರ್ಯಕ್ರಮಕ್ಕೆ ಸಹಕರಿಸಿದ ಶಾಲಾಭಿವೃದ್ಧಿ ಸಮಿತಿ, ಶಾಲಾ ಮುಖ್ಯ ಶಿಕ್ಷಕ ಹಾಗೂ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ., ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಾಲಪ್ಪ ಎಂ. ಪೆರಾಜೆ, ಘಟಕದ ಸಮಾಜ ಸೇವಾ ನಿರ್ದೇಶಕ ಸತೀಶ್ ಬಾಬಣಕಟ್ಟೆ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಘಟಕದ ಸದಸ್ಯೆಯಾದ ಪ್ರಜ್ಞಾ ಎಂ. ಪ್ರಾರ್ಥಿಸಿದರು. ಶಾಲೆಯ ಮುಖ್ಯಶಿಕ್ಷಕಿ ಯಶೋದಾ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಶಾಲಿನಿ ಜಗದೀಶ್ ವಂದಿಸಿದರು. ಮಾಜಿ ಕಾರ್ಯದರ್ಶಿ ಸಚಿನ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.